ಬೆಂಗಳೂರು : ರಾಜ್ಯ ಸರ್ಕಾರವು ಎಸ್ಕಾಂ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಎಸ್ಕಾಂ ಸಿಬ್ಬಂದಿಗಳಿಗೆ 5 ಲಕ್ಷ ರೂ.ವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಕಲ್ಪಿಸುವ ಸೌಲಭ್ಯ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಎಂಜಿನಿಯರ್ ಗಳ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಚಾಮುಂಡೇಶ್ವರಿ ವಿದ್ಯುತ್ ಕಂಪನಿ (ಸೆಸ್ಕ್) ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿದೆ. ಇತರೆ ಎಸ್ಕಾಂಗಳಲ್ಲೂ ಶೀಘ್ರವೆ ಈ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಇಂಧನ ಇಲಾಖೆಯ ಎಲ್ಲ ಎಸ್ಕಾಂ ಸಿಬ್ಬಂದಿಗೂ 5 ಲಕ್ಷ ರೂ.ವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಕಲ್ಪಿಸುವ ಸೌಲಭ್ಯವನ್ನು ಸದ್ಯದಲ್ಲೇ ಜಾರಿ ಮಾಡುವಂತೆ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಅವರಿಗೆ ಸಚಿವರು ಸೂಚನೆ ನೀಡಿದ್ದಾರೆ.