ಬೆಂಗಳೂರು: ರಾಜ್ಯದ ಅಂಗವಿಕಲರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಗ್ರೂಪ್-ಬಿ, ಎ ಹುದ್ದೆಗಳ ಮುಂಬಡ್ತಿಯಲ್ಲಿ ಶೇ.4 ರಷ್ಟು ಮೀಸಲಾತಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಂಪುಟ ಸಭೆಯಲ್ಲಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016 ರಲ್ಲಿ ಪರಿಭಾಷಿಸಲಾಗಿರುವ ಎದ್ದುಕಾಣುವ ಅಂಗವೈಕಲ್ಯವುಳ್ಳ ಅಧಿಕಾರಿಗಳಿಗೆ ಗುಂಪು-ಬಿ ಮತ್ತು ಗುಂಪು-ಎ (ಕಿರಿಯ ಶ್ರೇಣಿ) ಹುದ್ದೆಗಳಲ್ಲಿ ಮುಂಬಡ್ತಿಯಲ್ಲಿ ಶೇ.4 ರಷ್ಟು ಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಸಚಿವ ಹೆಚ್.ಕೆ ಪಾಟೀಲ್ ವಿವರಿಸಿದರು.
ಅಂಗವಿಕಲ ವ್ಯಕ್ತಿಗಳ ಹಕ್ಕು ಅಧಿನಿಯಮ 2016ರ ಅನ್ವಯ “Provided that the Reservation in Promotion shall be in accordance with such instructions as are issued by the appropriate Government from time to time” ಎಂಬ ಅವಕಾಶ ಕಲ್ಪಿಸಲಾಗಿದೆ. ಮಾನ್ಯ ಸರ್ವೋಚ್ಛ ನ್ಯಾಯಾಲಯವು ಈ ಅವಕಾಶವನ್ನು ಪುಷ್ಟೀಕರಿಸಿ ಆದೇಶ ಹೊರಡಿಸಿದೆ.