ಬೆಂಗಳೂರು : ರಾಜ್ಯದ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳನ್ನು ವಿಶೇಷ ಚೇತನ ಸ್ನೇಹಿಯಾಗಿಸಲು ಸಹಾಯಕ ಸಾಧನಗಳ ಪೂರೈಕೆ – ದರ್ಶಿನಿ ಕಾರ್ಯಕ್ರಮಕ್ಕೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ರವರು ಯೂಟ್ಯೂಬ್ ಮುಖಾಂತರ ಚಾಲನೆ ನೀಡಿದರು.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವರು, ಅರಿವು ಕೇಂದ್ರಗಳನ್ನು ವಿಶೇಷಚೇತನರ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿಶೇಷಚೇತನರ ಸಹಾಯಕ ಸಾಧನಗಳನ್ನು ಪೂರೈಸುವ ‘ದರ್ಶಿನಿ ಯೋಜನೆ’ಗೆ ಇಂದು ಚಾಲನೆ ನೀಡಿದೆ.
ಗ್ರಾಮ ಪಂಚಾಯತಿ ಗ್ರಂಥಾಲಯಗಳನ್ನು ‘ಅರಿವು ಕೇಂದ್ರ’ಗಳಾಗಿ ಮೇಲ್ದರ್ಜೇಗೇರಿಸಲಾಗಿದೆ. ಅರಿವು ಕೇಂದ್ರಗಳು ಇದೀಗ ಸಮುದಾಯದ ಜ್ಞಾನಾರ್ಜನೆಯ ಕೇಂದ್ರಗಳಾಗಿವೆ. ಎಲ್ಲರನ್ನೂ ಒಳಗೊಳ್ಳುವ ದಿಸೆಯಲ್ಲಿ ಅರಿವು ಕೇಂದ್ರಗಳನ್ನು ವಿಶೇಷ ಚೇತನ ಸ್ನೇಹಿಯಾಗಿಸಲು ಪ್ರಥಮ ಹಂತದಲ್ಲಿ 8 ಸಹಾಯಕ ಸಾಧನಗಳನ್ನು ನೀಡಲಾಗುತ್ತಿದೆ. ಹಂತ ಹಂತವಾಗಿ ಅವಶ್ಯಕತೆ ಹಾಗೂ ಅನುದಾನ ಲಭ್ಯತೆಗೆ ಅನುಗುಣವಾಗಿ ಹೆಚ್ಚಿನ ಸಹಾಯಕ ಸಾಧನಗಳನ್ನು ಒದಗಿಸುವ ಮೂಲಕ ಅರಿವು ಕೇಂದ್ರಗಳನ್ನು ಸದೃಢಗೊಳಿಸಲಾಗುವುದು ಎಂದರು.
ಈಗಾಗಲೇ ಡಿಜಿಟಲ್ ಕಲಿಕಾ ಸಾಮಗ್ರಿಗಳು, ವೃತ್ತಿಪರ ಮಾರ್ಗದರ್ಶನ ವ್ಯವಸ್ಥೆ, ಸಂವಿಧಾನದ ಶೈಕ್ಷಣಿಕ ವ್ಯವಸ್ಥೆ, ವಿಶೇಷ ಚೇತನ ಸ್ನೇಹಿ ತಾಂತ್ರಿಕತೆ ಹಾಗೂ ನುರಿತ ವ್ಯಕ್ತಿಗಳಿಂದ ಜ್ಞಾನಾರ್ಜನೆ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.ವಿಶೇಷ ಚೇತನ ವ್ಯಕ್ತಿಗಳು ಅರಿವು ಕೇಂದ್ರಗಳನ್ನು ಸುಲಭವಾಗಿ ಬಳಸಲು ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವಿಶೇಷವಾಗಿ, ದೃಷ್ಟಿಹೀನತೆ ಹೊಂದಿರುವ ವ್ಯಕ್ತಿಗಳಿಗೆ ಬೈಲ್ ಸಾಹಿತ್ಯ ಮತ್ತು ಇತರ ಸಹಾಯಕ ತಂತ್ರಜ್ಞಾನಗಳು ಲಭಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಅರಿವು ಕೇಂದ್ರಗಳಿಗೆ ಕಂಪ್ಯೂಟರ್ ಮತ್ತು ಯುಪಿಎಸ್ ಖರೀದಿಸಲು ಅನುದಾನ ಬಿಡುಗಡೆ ಮಾಡಲಾಗಿದೆ. ವಿಷಯ ಪರಿಣಿತರೊಂದಿಗೆ ಸಮಾಲೋಚಿಸಿ ಕೆಳಕಂಡ 8 ಸಹಾಯಕ ಉಪಕರಣಗಳನ್ನು NIEPVD (National Institute for Empowerment of Persons with Visual Disabilities) ಮೂಲಕ ಖರೀದಿಸಿ, ವಿತರಿಸಲು ಕ್ರಮವಹಿಸಲಾಗಿದೆ.
1. NIVH ಇಂಟರ್‌ಪಾಯಿಂಟ್ ಬ್ರೈಲ್ ಸ್ಲೇಟ್ ಮತ್ತು ಸ್ಟೈಲಸ್
2. ಕಾನ್‌ಕ್ಲೇವ್ ಹೆಡ್ ಪ್ಲಾಸ್ಟಿಕ್ ಸ್ಟೈಲಸ್
3. ಟ್ಯಾಕ್ಟೈಲ್ ಚೆಸ್ ಬೋರ್ಡ್ (ಇನ್‌ಕ್ಲೂಸಿವ್ ಡಿಸೈನ್)
4. ಆಡಿಯೋ ಬಾಲ್
5. ಪಜಲ್
6. ಹಾವು ಮತ್ತು ಏಣಿ
7. ಡೈಸ್ ಜೊತೆ ಪ್ಲೇಟ್
8. ಅಬಾಕಸ್
ಹೀಗೆ ಅರಿವು ಕೇಂದ್ರಗಳನ್ನು ವಿಶೇಷ ಚೇತನ ಸ್ನೇಹಿ ಮತ್ತು ಎಲ್ಲರನ್ನೂ ಒಳಗೊಳ್ಳುವ ಜ್ಞಾನ ಕೇಂದ್ರಗಳನ್ನಾಗಿಸಲು ಪ್ರಯತ್ನಿಸಲಾಗಿದೆ.
ಗ್ರಾಮೀಣ ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಗಳಿಗೆ ಸಜ್ಜಾಗಲು ಮತ್ತು ಮಕ್ಕಳಲ್ಲಿ ಪರಿಸರ ಸಂವೇದನಾಶೀಲತೆಗೆ ಪ್ರೋತ್ಸಾಹ, ಕಲಿಕೆಗೆ ಉತ್ತೇಜನ ನೀಡುವುದರ ಮೂಲಕ ‘ಅರಿವು ಕೇಂದ್ರಗಳ ಜ್ಞಾನ ಸಂಪನ್ಮೂಲವನ್ನು ಬಳಸಿಕೊಂಡು, ಯಶಸ್ಸಿನತ್ತ ಹೆಜ್ಜೆಯಿಡುತ್ತಿದ್ದಾರೆ. ಈ ಯೋಜನೆಯು ಕರ್ನಾಟಕ ಸರ್ಕಾರದ ಸಮಗ್ರ ಶಿಕ್ಷಣ ಮತ್ತು ಸಮುದಾಯ ಅಭಿವೃದ್ಧಿಯೆಡೆಗೆ ಇರುವ ಬದ್ಧತೆಯನ್ನು ಎತ್ತಿಹಿಡಿಯುತ್ತದೆ ಎಂದರು.