ಬೆಂಗಳೂರು: ನಗರದಲ್ಲಿನ ಕೇಕ್ ಅಂಗಡಿಗಳಲ್ಲಿನ ಕೇಕ್ ನಲ್ಲಿ ಅತೀಯಾದ ಕೃತಕ ಬಣ್ಣ ಬಳಕೆಯಾಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂಬುದಾಗಿ ಕೃತಕ ಬಣ್ಣವನ್ನು ಬ್ಯಾನ್ ಮಾಡಲಾಗಿತ್ತು. ಈ ಪರಿಣಾಮ ಕೇಕ್‌ನಲ್ಲಿ ಕೃತಕ ಬಣ್ಣದ ಪಮಾಣ ತಗ್ಗಿದೆ ಎಂಬುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದ್ದು, ಆಗಸ್ಟ್ 2024ರ ಮಾಹೆಯಲ್ಲಿ ಕೇಕ್‌ಗಳ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸುತ್ತಿರುವ ಕುರಿತಂತೆ 295 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು, ಅವುಗಳಲ್ಲಿ 12 ಮಾದರಿಗಳು (ಶೇ.4.06ರಷ್ಟು ಅಸುರಕ್ಷಿತ ಎಂದು ವರದಿಯಾಗಿರುತ್ತವೆ ಎಂದಿದೆ.
ಈ ಸಂಬಂಧಿಸಿದಂತೆ ಬೇಕರಿ ಉದ್ದಿಮೆದಾರರು ತಮ್ಮ ಉದ್ದಿಮೆಗಳಲ್ಲಿ ಕೇಕ್ ಸೇರಿದಂತೆ ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ಸ್ವಾಭಾವಿಕ/ನೈಸರ್ಗಿಕ ಬಣ್ಣಗಳನ್ನು ಬಳಸಲು ಅಥವಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು ನಿಯಮಗಳು 2011ರಡಿ ಅನುಮೋದಿತವಾಗಿರುವ ಕೃತಕ ಬಣ್ಣಗಳನ್ನು ನಿಗದಿತ ಮಿತಿಯೊಳಗೆ ಮಾತ್ರ ಬಳಸುವಂತೆ ಉದ್ದಿಮೆದಾರರ ಹಂತದಲ್ಲಿ ಮತ್ತು ಪತ್ರಿಕಾ ಪ್ರಕಟಣೆಯ ಮೂಲಕ ಅರಿವು ಮೂಡಿಸಲಾಗಿರುತ್ತದೆ ಎಂದು ತಿಳಿಸಿದೆ.
ಜನವರಿ 2025ರ ಮಾಹೆಯಲ್ಲಿ ವಿಶೇಷ ಅಭಿಯಾನದ ಮೂಲಕ ಮತ್ತೊಮ್ಮೆ ಕೇಕ್‌ಗಳ 603 ಮಾದರಿಗಳನ್ನು ವಿಶ್ಲೇಷಣೆಗೊಳಪಡಿಸಲಾಗಿದ್ದು, ಅವುಗಳಲ್ಲಿ 07 ಮಾದರಿಗಳು (ಶೇ.1.16% ರಷ್ಟು) ಅಸುರಕ್ಷಿತ ಎಂದು ವರದಿಯಾಗಿರುತ್ತವೆ ಎಂದಿದೆ.
ಜನವರಿ 2025ರ ಮಾಹೆಯಲ್ಲಿ ಕೇಕ್‌ನ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸುತ್ತಿರುವ ಕುರಿತ ವಿಶ್ಲೇಷಣಾ ಫಲಿತಾಂಶವು ಆಗಸ್ಟ್ 2024ರ ಮಾಹೆಯಲ್ಲಿನ ಫಲಿತಾಂಶಕ್ಕಿಂತ ಕಡಿಮೆಯಾಗಿರುವುದು ಉತ್ತಮ ಬೆಳವಣಿಗೆಯಾಗಿರುತ್ತದೆ. ಅಲ್ಲದೆ ಮುಂದಿನ ದಿನಗಳಲ್ಲೂ ಸಹ ಬೇಕರಿ ಉದ್ದಿಮೆದಾರರಿಗೆ ಸ್ವಾಭಾವಿಕ/ನೈಸರ್ಗಿಕ ಬಣ್ಣಗಳನ್ನು/ ಅನುಮೋದಿತವಾಗಿರುವ ಕೃತಕಬಣ್ಣಗಳನ್ನು ನಿಗದಿತ ಮಿತಿಯೊಳಗೆ ಬಳಸಲು ಅರಿವು ಮೂಡಿಸಲಾಗುವುದು ಹಾಗೂ ಮುಂಬರುವ ದಿನಗಳಲ್ಲಿ ಪುನಃ ವಿಶ್ಲೇಷಣಾ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಹೇಳಿದೆ.
ವಿಶೇಷ ಅಭಿಯಾನ
ಫೆಬ್ರವರಿ 2025ರ ಮಾಹೆಯಲ್ಲಿ ವಿಶೇಷ ಅಭಿಯಾನದ ಮೂಲಕ ಕುಡಿಯುವ ನೀರಿನ ಬಾಟಲ್‌ಗಳಲ್ಲಿನ ನೀರಿನ 288 ಮಾದರಿಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಿದ್ದು, ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ. ಅಲ್ಲದೆ ಕರಿದ ಹಸಿರು ಬಟಾಣಿಗಳಲ್ಲಿ ಕೃತಕ ಬಣ್ಣಗಳ ಬಳಕೆಯ ಬಗ್ಗೆ ಖಚಿತಪಡಿಸಿಕೊಳ್ಳಲು 106 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, ಅವುಗಳಲ್ಲಿ 31 ಮಾದರಿಗಳ ವಿಶ್ಲೇಷಣಾ ಕಾರ್ಯಪೂರ್ಣಗೊಂಡಿದ್ದು, 05 ಮಾದರಿಗಳು ಸುರಕ್ಷಿತಎಂದು, 26 ಮಾದರಿಗಳು ಅಸುರಕ್ಷಿತ ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ. ವಿಶ್ಲೇಷಣಾ ಫಲಿತಾಂಶಗಳನ್ವಯ ಮುಂದಿನ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು.
ಇದಲ್ಲದೆ ಫೆಬ್ರವರಿ 2025ರ ಮಾಹೆಯಲ್ಲಿ ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಪೇಪರ್ ಅನ್ನು ಬಳಸುತ್ತಿರುವ ಕುರಿತಂತೆ 681 ಹೋಟೆಲ್, ರೆಸ್ಟೋರೆಂಟ್ ಹಾಗೂ ಬೀದಿ ಬದಿ ವ್ಯಾಪಾರ ಘಟಕಗಳನ್ನು ವಿಶೇಷ ಅಭಿಯಾನದ ಮೂಲಕ ತಪಾಸಣೆ ಮಾಡಿ ಅವುಗಳಲ್ಲಿ ಪ್ಲಾಸ್ಟಿಕ್ ಪೇಪರ್ ಅನ್ನು ಬಳಸುತ್ತಿದ್ದ 52 ಆಹಾರ ಉದ್ದಿಮೆಗಳಿಗೆ ನೋಟಿಸ್ ಅನ್ನು ಜಾರಿಗೊಳಿಸಲಾಗಿರುತ್ತದೆ.
ಮೇಲ್ಕಂಡ ಅಂಶಗಳ ಕುರಿತು ಸಾರ್ವಜನಿಕರಿಗೆ ಹಾಗೂ ಆಹಾರ ಉದ್ದಿಮೆದಾರರುಗಳಿಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಿಂದ ಜರುಗಿಸಲಾಗುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಈ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.
ಬೆಂಗಳೂರು ಜನತೆ ಗಮನಕ್ಕೆ: ಮಾ.2ರ ಭಾನುವಾರದಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ಸಾರ್ವಜನಿಕರೇ ಹುಷಾರ್.! ‘ಮಲ ಹೋರುವ ಪದ್ದತಿ’ ಪ್ರೋತ್ಸಾಹಿಸಿದ್ರೇ 2-7 ವರ್ಷ ಜೈಲು, 2-5 ಲಕ್ಷ ದಂಡ ಫಿಕ್ಸ್