ಬೆಂಗಳೂರು: ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಗಳ ಶ್ರೇಯೋಭಿವೃದ್ಧಿಗಾಗಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ ಸ್ವಯಂ ಉದ್ಯೋಗಿ ಬ್ರಾಹ್ಮಣರಿಗೆ 5 ಲಕ್ಷ ರೂ.ವರೆಗೆ ಸರ್ಕಾರಿ ಸಹಾಯಧನ ನೀಡಲಾಗುತ್ತಿದೆ. ಜೊತೆಗೆ ಸ್ವಾವಲಂಬಿ ಮತ್ತು ಸಾಂದೀಪಿನಿ ಶಿಷ್ಯ ವೇತನದ ಯೋಜನೆಗಳ ಉಪಯೋಗವನ್ನು ಅರ್ಹರು ಪಡೆದುಕೊಳ್ಳಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮುಜುರಾಯಿ ಇಲಾಖೆಗೆ ಒಳಪಟ್ಟ ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೆ ಬಂದಿದೆ. ಬರ್ಮುಡ ಚಡ್ಡಿ, ಜೀನ್ಸ್ ಧರಿಸಿ ಬಂದವರು ಇನ್ನು ಮುಂದೆ ಪಂಚೆ ತೊಡುವುದು ಕಡ್ಡಾಯ. ಮಹಿಳೆಯರು ತುಂಡುಡುಗೆಯಲ್ಲಿ ಬಂದರೆ ಅದರ ಮೇಲೆ ಶಲ್ಯ ತೊಡಬೇಕಾಗಿದೆ. ಪ್ರವಾಸಕ್ಕೆ ಬರುವವರು ದೇವಸ್ಥಾನಕ್ಕೆ ಭೇಟಿ ನೀಡುವಾಗ ಭಕ್ತಿ ಭಾವನೆ ಉದ್ದೀಪನೆಯ ಉಡುಪು ಧರಿಸಿ ದೇವರ ದರ್ಶನ ಪಡೆಯಬೇಕು. ಈ ಸದುದ್ದೇಶದಿಂದ ಈ ವಿಶೇಷ ಕ್ರಮ ವಹಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ತಿಳಿಸಿದ್ದಾರೆ. ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ನಡೆದ ದುರಂತದಲ್ಲಿ ಮೃತಪಟ್ಟ 32 ಮಂದಿಯ ಕುಟುಂಬದ ಸದಸ್ಯರಿಗೆ ಹೊರಗುತ್ತಿಗೆಯಡಿ ಉದ್ಯೋಗ ಕಲ್ಪಿಸಲಾಗಿದೆ. ಸಂತ್ರಸ್ತರ ಕುಟುಂಬದವರು ಫೆಬ್ರವರಿ 1ರಿಂದ ಜಿಲ್ಲೆಯಲ್ಲಿ ಕೆಲಸ ಮಾಡಬಹುದು. ಸಂಬಂಧಿಸಿದವರು ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸಬೇಕು. ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚು ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.