ಬೆಂಗಳೂರು: ರಾಜ್ಯ ಸರ್ಕಾರದಿಂದ ಬಿಎಂಟಿಸಿ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ. ಗುಂಪು ವಿಮಾ ಯೋಜನೆಯ ಪರಿಹಾರದ ಮೊತ್ತವನ್ನು 3 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಅಲ್ಲದೇ ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು 17 ಮೃತ ನೌಕರರ ಅವಲಂಬಿತರಿಗೆ ಗುಂಪು ವಿಮಾ ಯೋಜನೆಯ ಪರಿಹಾರದ ಹಣವಾಗಿ ರೂ.10.00 ಲಕ್ಷ ವಿತರಣೆಯನ್ನು ಮಾಡಿದರು.
ಈ ಕುರಿತಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ನೌಕರರ ಹಿತದೃಷ್ಟಿಯಿಂದ ಅನಾರೋಗ್ಯ/ಇನ್ನಿತರೆ ಕಾರಣಗಳಿಂದ ಮೃತಪಟ್ಟಂತಹ ಅಧಿಕಾರಿ/ನೌಕರರ ಅವಲಂಭಿತ ಕುಟುಂಬದ ಆರ್ಥಿಕ ಭದ್ರತೆಯನ್ನು ನೀಡುವ ನಿಟ್ಟಿನಲ್ಲಿ ಈ ಹಿಂದೆ ಜಾರಿಯಲ್ಲಿದ್ದಂತಹ ಗುಂಪು ವಿಮಾ ಯೋಜನೆಯ ಪರಿಹಾರ ಮೊತ್ತವನ್ನು ರೂ.3.00 ಲಕ್ಷಗಳಿಂದ ರೂ.10.00 ಲಕ್ಷಗಳಿಗೆ ಪರಿಷ್ಕರಿಸಿ ದಿನಾಂಕ:19.02.2024 ರಿಂದ ಜಾರಿಗೆ ತರಲಾಗಿರುತ್ತದೆ ಎಂದಿದೆ.
ಈ ಯೋಜನೆಯನ್ವಯ, ಪ್ರಸ್ತುತ ಅರ್ಹ 17 ಮೃತ ನೌಕರರ ನಾಮನಿರ್ದೇಶಿತರಿಗೆ ತಲಾ 10 ಲಕ್ಷಗಳಂತೆ ಒಟ್ಟು ಒಂದು ಕೋಟಿ ಎಪ್ಪತ್ತು ಲಕ್ಷ (1,70,00,000) ರೂಪಾಯಿಗಳನ್ನು ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ರವರು ಗುಂಪು ವಿಮಾ ಪರಿಹಾರ ಮೊತ್ತವನ್ನು ಫಲಾನುಭವಿಗಳಿಗೆ ದಿನಾಂಕ:31.12.2024 ರಂದು ವಿತರಿಸಿದರು.
ಮುಂದುವರೆದು, ಹಬ್ಬದ ದಿನಗಳಲ್ಲಿ ಅತ್ಯುತ್ತಮವಾಗಿ ವಾಹನಗಳನ್ನು ಕಾರ್ಯಾಚರಣೆ ಮಾಡಿ ಸಂಸ್ಥೆಗೆ ಹೆಚ್ಚಿನ ಸಾರಿಗೆ ಆದಾಯ ತಂದಂತಹ ಘಟಕ ವ್ಯವಸ್ಥಾಪಕರುಗಳಿಗೆ ಪ್ರಶಾಂಸನ ಪತ್ರ ಮತ್ತು ನಗದು ಬಹುಮಾನವನ್ನು ವಿತರಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್. ಆರ್ ರವರು ಮತ್ತು ಸಂಸ್ಥೆಯ ನಿರ್ದೇಶಕರು (ಭದ್ರತಾ ಮತ್ತು ಜಾಗೃತೆ)ರವರಾದ ಅಬ್ದುಲ್ ಅಹದ್ ರವರು ಹಾಗೂ ಇಲಾಖಾ ಮುಖ್ಯಸ್ಥರುಗಳು, ವಿಭಾಗೀಯ ನಿಯಂತ್ರಣಾಧಿಕಾರಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
BIG NEWS: ರಾಜ್ಯದಲ್ಲೊಂದು ಧಾರುಣ ಘಟನೆ: ಅಂಗನವಾಡಿಗೆ ತೆರಳಿದ್ದ ಬಾಲಕಿ ಹಾವು ಕಡಿದು ಸಾವು