ಬೆಂಗಳೂರು: ರಾಜ್ಯ ಸರ್ಕಾರದಿಂದ ಕೆಎಸ್ಆರ್ ಟಿಸಿ ನೌಕರರಿಗೆ ಈಗಾಗಲೇ ಗುಂಪು ವಿಮಾ ಯೋಜನೆಯ ಪರಿಹಾರದ ಮೊತ್ತವನ್ನು 3 ಲಕ್ಷದಿಂದ 10 ಲಕ್ಷ ಮಾಡಲಾಗಿತ್ತು. ಅಲ್ಲದೇ ವೈಯಕ್ತಿಕ ಅಪಘಾತದಿಂದ ಮೃತಪಟ್ಟ ನೌಕರರಿಗೆ ಗುಂಪು ವಿಮಾ ಯೋಜನೆಯಡಿ ಪರಿಹಾರ ಮೊತ್ತ 50 ಲಕ್ಷಗಳನ್ನು ಹೆಚ್ಚಿಸಿತ್ತು. ಈಗ ಈ ವಿಮಾ ಪರಿಹಾರವನ್ನು ಬಿಎಂಟಿಸಿ ನೌಕರರಿಗೂ ವಿಸ್ತರಿಸಲಾಗಿದೆ.
ಈ ಕುರಿತಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಜನ ಸಾಮಾನ್ಯರಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಮಹತ್ವದ ಜವಾಬ್ದಾರಿಯನ್ನು ಹೊಂದಿರುವ ಸಂಸ್ಥೆಯಾಗಿದೆ. ಸೇವೆಯಲ್ಲಿರುವಾಗ ಮೃತಪಟ್ಟಲ್ಲ, ಅವರ ಅವಲಂಬಿತರ ಜೀವನಕ್ಕೆ ಆರ್ಥಿಕವಾಗಿ ಸಹಾಯ ಮಾಡುವ ಹಿತದೃಷ್ಠಿಯಿಂದ ನೌಕರರ ಮಾಸಿಕ ವೇತನದಲ್ಲಿ ರೂ.70/- ಗಳ ವಂತಿಗೆಯೊಂದಿಗೆ ನೌಕರರು ಮೃತಪಟ್ಟಲ್ಲಿ ಅವರ ಕುಟುಂಬದವರಿಗೆ ರೂ.3.00 ಲಕ್ಷಗಳನ್ನು ಪಾವತಿಸುವ ಸಲುವಾಗಿ ಗುಂಪು ವಿಮಾ ಯೋಜನೆಯನ್ನು ದಿನಾಂಕ:01.01.2008 ರಿಂದ ಜಾರಿಗೆ ತರಲಾಗಿರುತ್ತದೆ. ಪ್ರಸ್ತುತ ಈ ಯೋಜನೆಯು ಜಾರಿಯಲ್ಲಿರುತ್ತದೆ ಎಂದಿದ್ದಾರೆ.
ಕರಾರಸಾಸಂಸ್ಥೆಯಲ್ಲಿ ದಿನಾಂಕ:20.11.2023 ರಂದು ಸುತ್ತೋಲೆ ಸಂಖ್ಯೆ:136/2023 ನ್ನು ಹೊರಡಿಸಿದ್ದು, ನೌಕರರಿಂದ ಮಾಸಿಕ ರೂ.350/-ಗಳ ವಂತಿಗೆ ಮತ್ತು ನಿಗಮದ ವತಿಯಿಂದ ಪ್ರತಿ ಸದಸ್ಯ ನೌಕರರ ಪರವಾಗಿ ರೂ.150/-(ಒಟ್ಟು ರೂ.500/-ಗಳು) ವಂತಿಗೆಯೊಂದಿಗೆ ಸೇವೆಯಲ್ಲಿರುವಾಗ ಸಿಬ್ಬಂದಿಗಳು ಮರಣ ಹೊಂದಿದ್ದಲ್ಲ, ಅಂದರೆ ಅಪಘಾತ ಹೊರತುಪಡಿಸಿ ಇತರೆ ಯಾವುದೇ ಕಾರಣಗಳಿಂದ ಮೃತಪಟ್ಟ ಪ್ರಕರಣಗಳಲ್ಲಿ ರೂ.10.00 ಲಕ್ಷಗಳ (ಹತ್ತು ಲಕ್ಷ ರೂಪಾಯಿಗಳು) ಪರಿಹಾರ ಮೊತ್ತವನ್ನು ಹಾಗೂ ಅಪಘಾತದಿಂದ (ಕರ್ತವ್ಯ ನಿರತ ಮತ್ತು ಖಾಸಗಿ ಅಪಘಾತ ಸೇರಿದಂತೆ) ಸಿಬ್ಬಂದಿಗಳು ಮರಣ ‘ ಹೊಂದಿದ ಪ್ರಕರಣಗಳಲ್ಲಿ ಮೃತರ ನಾಮನಿರ್ದೇಶಿತರಿಗೆ ರೂ.50.00 ಲಕ್ಷಗಳ (ಐವತ್ತು ಲಕ್ಷ ರೂಪಾಯಿಗಳು) ಪರಿಹಾರ ಮೊತ್ತವನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿರುತ್ತದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಕಾರ್ಮಿಕ ಸಂಘಟನೆಗಳಿಂದಲೂ ಸಹ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಬೆಂಮನಸಾಸಂಸ್ಥೆಯಲ್ಲಿಯು ಸಹ ಕರಾರಸಾನಿಗಮದಲ್ಲಿ ಜಾರಿಗೆ ತಂದಿರುವ ವಿಮಾ ಯೋಜನೆಯನ್ನು ಯಥಾವತ್ತಾಗಿ ಅಳವಡಿಸಿಕೊಳ್ಳಲಾಗಿರುತ್ತದೆ. ಅಪಘಾತದಿಂದ (ಕರ್ತವ್ಯ ನಿರತ ಮತ್ತು ಖಾಸಗಿ ಅಪಘಾತ ಸೇರಿದಂತೆ) ಸೇವಾವಧಿಯಲ್ಲಿ ಮೃತಪಟ್ಟ ಪ್ರಕರಣಗಳಲ್ಲಿ ಹೆಚ್ಚಿನ ಪರಿಹಾರ ನೀಡಲು ಮತ್ತು ಅಪಘಾತ ಹೊರತುಪಡಿಸಿ ಇನ್ನಿತರೆ ಕಾರಣಗಳಿಂದ ಮೃತಪಟ್ಟ ಕುಟುಂಬದವರಿಗೆ ಆರ್ಥಿಕ ಭದ್ರತೆ ನೀಡಿ ಅನುಕೂಲ ಮಾಡಿಕೊಡುವ ಸದುದ್ದೇಶದಿಂದ ನೌಕರರ ಇಲಾಖಾ ಗುಂಪು ವಿಮಾ ಯೋಜನೆಯನ್ನು ಈ ಕೆಳಗಿನಂತೆ ಪರಿಷ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಪಘಾತದಿಂದ (ಕರ್ತವ್ಯ ನಿರತ ಮತ್ತು ಖಾಸಗಿ ಅಪಘಾತ ಸೇರಿದಂತೆ) ಸಿಬ್ಬಂದಿಗಳು ಮರಣ ಹೊಂದಿದ ಪ್ರಕರಣಗಳಲ್ಲಿ ಮಾತ್ರ ಮೃತರ ನಾಮನಿರ್ದೇಶಿತರಿಗೆ ರೂ.50.00 ಲಕ್ಷಗಳ (ಐವತ್ತು ಲಕ್ಷ ರೂಪಾಯಿಗಳು) ಪರಿಹಾರ ಮೊತ್ತವನ್ನು ನೀಡುವುದು ಎಂದಿದ್ದಾರೆ.
ಅಪಘಾತ ಹೊರತುಪಡಿಸಿ ಇತರೇ ಯಾವುದೇ ಕಾರಣಗಳಿಂದ ಮೃತಪಟ್ಟ ಪ್ರಕರಣಗಳಲ್ಲಿ ರೂ.10.00 ಲಕ್ಷಗಳ (ಹತ್ತು ಲಕ್ಷ ರೂಪಾಯಿಗಳು) ಪರಿಹಾರ ಮೊತ್ತವನ್ನು ನೀಡುವುದು. ನೌಕರರ ಮಾಸಿಕ ವಂತಿಗೆಯನ್ನು ಪ್ರಸ್ತುತ ರೂ.70.00 ಗಳಿಂದ ರೂ.350/- ಗಳಿಗೆ ಹೆಚ್ಚಿಸಿ ಹಾಗೂ ನಿಗಮದ ವತಿಯಿಂದ ಪ್ರತಿ ಸದಸ್ಯ ನೌಕರರ ಪರವಾಗಿ ರೂ.150/- ಗಳನ್ನು ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.
ಪರಿಷ್ಕೃತ ವಂತಿಗೆಯನ್ನು ಫೆಬ್ರವರಿ-2024 ಮಾಹೆಯ “ವೇತನದಿಂದ ಕಡಿತಗೊಳಿಸುವುದು.
ದಿನಾಂಕ:19.02.2024 ಮತ್ತು ನಂತರದಲ್ಲಿ ಅಪಘಾತದಿಂದ ಮರಣ ಹೊಂದಿದ ಪ್ರಕರಣಗಳಲ್ಲಿ ಮಾತ್ರ ರೂ.50.00 ಲಕ್ಷಗಳ (ಐವತ್ತು ಲಕ್ಷ ರೂಪಾಯಿಗಳು) ಮತ್ತು ಅಪಘಾತ ಹೊರತುಪಡಿಸಿ ಇನ್ನಿತರೆ ಕಾರಣಗಳಿಂದ ಮೃತಪಟ್ಟ ಅವಲಂಬಿತರಿಗೆ ರೂ.10.00 ಲಕ್ಷ (ಹತ್ತು ಲಕ್ಷ ರೂಪಾಯಿಗಳು) ಪರಿಹಾರ ಮೊತ್ತಕ್ಕೆ ಅರ್ಹರಿರುತ್ತಾರೆ.
ಅಪಘಾತ ಮರಣ ಪ್ರಕರಣಗಳು ಮತ್ತು ಈ ಕೈಮ್ ಸಂಬಂಧ ಅನುಸರಿಸಬೇಕಾದ ಕ್ರಮಗಳ ಕುರಿತು ನಿರ್ದೇಶನಗಳನ್ನು ನಂತರದಲ್ಲಿ ನೀಡಲಾಗುವುದು ಎಂದಿದ್ದಾರೆ.