ಬೆಂಗಳೂರು : “ಬಗರ್ ಹುಕುಂ” ಸಾಗುವಳಿದಾರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, 2 ತಿಂಗಳಲ್ಲಿ ಅರ್ಜಿ ವಿಲೇವಾರಿ ಮಾಡಿ ಅರ್ಹರಿಗೆ ಭೂಮಿ ಮಂಜೂರು ಮಾಡುವಂತೆ ಸೂಚನೆ ನೀಡಲಾಗಿದೆ.
ಬಗರ್ ಹುಕುಂ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು ಈಗಲೂ ಮೀನಾಮೇಷ ಎಣಿಸುವುದು ಸರಿಯಲ್ಲ. ಹೀಗಾಗಿ ಎಲ್ಲಾ ತಹಶೀಲ್ದಾರರಿಗೆ ಅಕ್ಟೋಬರ್ ಹಾಗೂ ನವೆಂಬರ್ ಅಂತ್ಯದವರೆಗೆ ಎರಡು ತಿಂಗಳ ಗಡುವು ನೀಡುತ್ತಿದ್ದು, ಈ ಅವಧಿಯಲ್ಲೂ ಬಗರ್ ಹುಕುಂ ಅರ್ಜಿಗಳ ಸಮರ್ಪಕ ವಿಲೇವಾರಿ ಹಾಗೂ ಅರ್ಹ ರೈತರಿಗೆ ಭೂ ಮಂಜೂರು ಆಗದಿದ್ದರೆ, ಸಂಬಂಧಿತ ತಹಶೀಲ್ದಾರರಿಗೆ ನೋಟೀಸ್ ಜಾರಿಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆಯ ಸಂದೇಶ ರವಾನಿಸಿದರು.
“ಅರ್ಹ ಭೂ ಹೀನರಿಗೆ ಜಮೀನು ಮಂಜೂರು ಮಾಡಬೇಕು ಎಂಬುದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಇದೇ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಅಕ್ರಮ ಸಕ್ರಮ ಯೋಜನೆಯ ಅಡಿ “ಬಗರ್ ಹುಕುಂ” ಅರ್ಜಿ ಆಹ್ವಾನಿಸಲಾಯಿತು. ಅಲ್ಲದೆ, ಕಳೆದ ಒಂದು ವರ್ಷದಿಂದ ಸ್ವತಃ ನಾನು ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡುತ್ತಾ, ಬಗರ್ ಹುಕುಂ ಸಂಬಂಧಿತ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದರೂ, ಕೆಲವು ಅಧಿಕಾರಿಗಳ ಕೆಲಸ ತೃಪ್ತಿಕರವಾಗಿಲ್ಲ. ಬಡವರ ರೈತರ ಪರ ಕೆಲಸ ಮಾಡಲು ಅಸಡ್ಡೆ ತೋರುತ್ತಿದ್ದಾರೆ” ಎಂದು ಅಸಮಾಧಾನ ಹೊರಹಾಕಿದ್ದಾರೆ.
“ಈಗಾಗಲೇ ಸಲ್ಲಿಕೆಯಾಗಿರುವ ಬಗರ್ ಹುಕುಂ ಅರ್ಜಿಗಳ ಪೈಕಿ ಅರ್ಹ ಅರ್ಜಿಗಳು ಯಾವುವು? ಅನರ್ಹ ಅರ್ಜಿಗಳು ಯಾವುವು ಎಂದು ತಹಶೀಲ್ದಾರ್ ಗಳಿಗೆ ಪ್ರಾಥಮಿಕ ಪರಿಶೀಲನೆಯಲ್ಲೆ ತಿಳಿಯುತ್ತದೆ. ಹೀಗಾಗಿ ಈ ಕೆಲಸವನ್ನು ಅಧಿಕಾರಿಗಳು ಕಚೇರಿಯಲ್ಲೇ ಮುಗಿಸಿ. ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಕೆಳಗೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಅವರಿಗೆ ಅನಗತ್ಯವಾಗಿ ಕೆಲಸ ನೀಡಬೇಡಿ. ಅನರ್ಹ ಅರ್ಜಿಗಳ ಪರಿಶೀಲನೆಗಾಗಿ ಅವರನ್ನು ಫೀಲ್ಡ್ ಗೆ ಕಳುಹಿಸಬೇಡಿ” ಎಂದು ತಾಕೀತು ಮಾಡಿದ್ದಾರೆ.