ಬೆಳಗಾವಿ: ರಾಜ್ಯದ ಅನೇಕ ರೈತರು ಬಗರ್ ಹುಕುಂ ಅಡಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಸಾಗುವಳಿ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇವರಿಗೆ ಸಚಿವ ಕೃಷ್ಣ ಭೈರೇಗೌಡ ಗುಡ್ ನ್ಯೂಸ್ ಎನ್ನುವಂತೆ, ಬಗರ್ ಹುಕುಂ ಅರ್ಜಿ ವಿಲೇಗೆ ಒತ್ತು ನೀಡಲಾಗುತ್ತಿದೆ. ಶೀಘ್ರವೇ ಅರ್ಜಿ ವಿಲೇವಾರಿ ಮಾಡುವುದಾಗಿ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧ ಭವನದಲ್ಲಿ ಶನಿವಾರ ಬೆಳಗಾವಿ ವಿಭಾಗದ ಜಿಲ್ಲೆಗಳ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಹಾಗೂ ಮಳೆ, ಪ್ರವಾಹ ವಿಷಯದ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿದರು. ಮೊದಲಿಗೆ ಕಳೆದ ಒಂದು ವರ್ಷದಲ್ಲಿ ಬೆಳಗಾವಿ ವಿಭಾಗದಲ್ಲಿ ಸಾಕಷ್ಟು ಪ್ರಗತಿ ಕೆಲಸಗಳಾಗಿರುವುದನ್ನು ತಿಳಿಸಿ ಅಧಿಕಾರಿಗಳಿಗೆ ಅಭಿನಂದಿಸಿದರು. ಆದರೂ, ಕೆಲವು ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಿರ್ವಹಿಸದಿರುವುದರಿಂದ ಮುಂದಿನ ದಿನಗಳಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಲು ಸೂಚಿಸಿದರು.
ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಲಕ್ಷಾಂತರ ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರ್ಹರಿಗೆ ಮಾತ್ರ ಜಮೀನು ಮಂಜೂರು ಮಾಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಅವರು, “ಈ ಹಿಂದೆ ಬಗರ್ ಹುಕುಂ ಸಾಗುವಳಿ ಚೀಟಿ ನೀಡುವ ವೇಳೆ ಅನರ್ಹರಿಗೂ ಜಮೀನು ಮಂಜೂರು ಮಾಡಲಾಗಿದೆ. ನಿಯಮ ಮೀರಿ ಸಾಕಷ್ಟು ಅಕ್ರಮ ನಡೆಸಲಾಗಿದೆ. ಆದರೆ ಈ ಬಾರಿ ಅಂತಹ ಯಾವುದೇ ಪ್ರಹಸನಗಳಿಗೆ ಆಸ್ಪದ ಇಲ್ಲ. ಬಗರ್ ಹುಕುಂ ಸಭೆಯ ಬಯೋ ಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ಪಡೆಯಬೇಕು” ಎಂದು ತಾಕೀತು ಮಾಡಿದರು.
ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಅಥವಾ ರಾಜಕೀಯ ಪಕ್ಷದ ನಾಯಕರಿಗೆ ಅನುಕೂಲವಾಗುವಂತೆ ವರ್ತಿಸಬಾರದು, ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು. ಮುಂದಿನ 6 ತಿಂಗಳಲ್ಲಿ ಅರ್ಹರಿಗೆ ಸಾಗುವಳಿ ಚೀಟಿ ನೀಡಬೇಕು,ಸಾಗುವಳಿ ಚೀಟಿ ನೀಡುತ್ತಿದ್ದಂತೆ ಹೊಸ ಸರ್ವೇ ನಂಬರ್ ಪೋಡಿಯನ್ನೂ ಸಹ ಒದಗಿಸಬೇಕು ಎಂದರು.