2023-24 ನೇ ಸಾಲಿನಲ್ಲಿ ಬೆಳೆದ ರಾಗಿ ಮತ್ತು ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಖರೀದಿಸಲು ಬಳ್ಳಾರಿ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ತೀರ್ಮಾನಿಸಿದ್ದು, ರಾಜ್ಯದಲ್ಲಿ ಇನ್ನು 3 ಲಕ್ಷ ಮೆ.ಟನ್ ಜೋಳವನ್ನು ಹಾಗೂ 5,99,392 ಮೆ.ಟನ್ ರಾಗಿಯನ್ನು ರೈತರಿಂದ ಖರೀದಿಸಲು ಸರ್ಕಾರ ಮುಂದಾಗಿದೆ.
ಖರೀದಿ ಪ್ರಕ್ರಿಯೆಯಲ್ಲಿ ಖರೀದಿ ಮಿತಿಯು ಪ್ರತಿ ರೈತರಿಂದ ಪ್ರತಿ ಎಕರೆಗೆ 10 ಕ್ವಿಂ ನಂತೆ ಗರಿಷ್ಠ 20 ಕ್ವಿಂಟಾಲ್ ಗರಿಷ್ಠ ಮಿತಿ ಇದ್ದು, ಜಿಲ್ಲೆಯ ರೈತರು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ನೋಂದಣಿ ಮತ್ತು ಖರೀದಿ ಅವಧಿ:
2023-24 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ ಖರೀದಿಸಲು ತೀರ್ಮಾನಿಸಿರುವ ಕೃಷಿ ಉತ್ಪನ್ನ, ರೈತರ ನೋಂದಣಿ, ಖರೀದಿ ಪ್ರಾರಂಭದ ದಿನದ ವಿವರ ಇಂತಿದೆ.
ಮುಂಗಾರು/ಹಿಂಗಾರು ಋತುವಿನ ಖರೀದಿಸುವ ಕೃಷಿ ಉತ್ಪನ್ನಗಳು: ರಾಗಿ, ಜೋಳ.
ಮುಂಗಾರು/ಹಿಂಗಾರು ಋತುವಿನ ರೈತರ ನೋಂದಣಿ ಅವಧಿ: ಮಾ.31 ರವರೆಗೆ.
ಖರೀದಿ ಪ್ರಾರಂಭ ಮತ್ತು ಮುಕ್ತಾಯದ ದಿನಾಂಕ: ಏ.01 ರಿಂದ ಜೂನ್ 30 ರವರೆಗೆ.
2023-24 ನೇ ಸಾಲಿನ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆಯನ್ನು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಇವರನ್ನು ಖರೀದಿ ಏಜೆನ್ಸಿಯಾಗಿ ನೇಮಿಸಿದೆ. ಕೇಂದ್ರ ಸರ್ಕಾರವು ನಿಗಧಿಪಡಿಸಿದ ಗುರಿ ತಲುಪದೇ ಇರುವುದರಿಂದ ರಾಗಿ, ಜೋಳ ಖರೀದಿಯನ್ನು ಜೂನ್ 30 ರ ವರೆಗೆ ವಿಸ್ತರಿಸಿ ಆದೇಶಿಸಿದೆ ಎಂದು ಅವರು ತಿಳಿಸಿದ್ದಾರೆ.