ಬೆಂಗಳೂರು : ಕೃಷಿ ಇಲಾಖೆ ವತಿಯಿಂದ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಘಟಕಗಳಿಗಾಗಿ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಘಟಕಗಳಿಗೆ ಒಟ್ಟು 6 ಕಡ್ಡಾಯ ಘಟಕಗಳನ್ನು (ಕೃಷಿ ಹೊಂಡ, ಕ್ಷೇತ್ರ ಬದು, ಪಾಲಿಥಿನ್ ಹೊದಿಕೆ ಕೆಂಪು ಮಣ್ಣಿಗೆ ಮಾತ್ರ, ತಂತಿಬೇಲಿ, ಡೀಸಲ್ಎಂಜಿನ್, ಸ್ಪ್ರಿಂಕ್ಲರ್ ಸೆಟ್) ಒಳಗೊಂಡ ಪ್ಯಾಕೇಜ್ ಇದ್ದು, ಅರ್ಹ ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಮಳೆಯಾಶ್ರಿತ ಕೃಷಿ ನೀತಿ, 2014 ರನ್ವಯ 2023-24ನೇ ಸಾಲಿನಲ್ಲಿ ರಾಜ್ಯದ 5 ಒಣ ಹವಾಮಾನ ವಲಯಗಳ 24 ಬರ ಪೀಡಿತ ಜಿಲ್ಲೆಗಳಲ್ಲಿನ 106 ತಾಲ್ಲೂಕುಗಳಲ್ಲಿ ಹಾಗೂ ಗಣಿಗಾರಿಕೆಯಿಂದ ಬಾಧಿತ ಪ್ರದೇಶದಲ್ಲಿ ಸುಸ್ಥಿರ ಕೃಷಿಯನ್ನು ಉತ್ತೇಜಿಸಿ, ಬೆಲೆ ಉತ್ಪಾದಕತೆ ಮತ್ತು ರೈತರ ಜೀವನ ಮಟ್ಟವನ್ನು ಸುಧಾರಿಸುವುದರೊಂದಿಗೆ ಬರ ಉಪಶಮನದ ಗುರಿಯನ್ನು ಈ ಯೋಜನೆ ಹೊಂದಿರುತ್ತದೆ.
ಉದ್ದೇಶಗಳು:
ರಾಜ್ಯದ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವುದು. ಸಮರ್ಪಕ ಮಳೆ ನೀರನ ಸಂಗ್ರಹಣ ಹಾಗೂ ಉಪಯುಕ್ತ ಬಳಕೆ ಪದ್ದತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮ ಪಡಿಸುವುದು ಮತ್ತು ಆದಾಯವನ್ನು ಹೆಚ್ಚಿಸುವುದು. ಮಳೆ ನೀರನ್ನು ವ್ಯರ್ಥ ಮಾಡದೇ ಆಯ್ಕೆ ಸ್ಥಳದಲ್ಲಿ ಕೃಷಿ ಹೊಂಡತೆಗೆದು ಜಲ ಸಂಗ್ರಹಿಸಿದ್ದಲ್ಲಿ, ಬೆಳೆಗಳ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸಿ ಅಂತರ್ಜಲ ಮರುಪೂರಣಕ್ಕೆ ಅನುಕೂಲವಾಗುತ್ತದೆ.
ಫಲಾನುಭವಿಯ ಆಯ್ಕೆ:
ರೈತರು ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೆ ನಂಬರ್ನಲ್ಲಿ ಕನಿಷ್ಠ 1 ಎಕರೆ ಇರಬೇಕು. ಹಿಂದಿನ ವರ್ಷಗಳಲ್ಲಿ ಕೃಷಿ ಭಾಗ್ಯಯೋಜನೆ ಅಥವಾ ಇನ್ಯಾವುದೇ ಯೋಜನೆಯಡಿ ಕೃಷಿ ಹೊಂಡ ಫಲಾನುಭವಿಯಾಗಿರುವ ರೈತರು ಈ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ (ಕೆ-ಕಿಸಾನ್ ಪೋರ್ಟಲ್ನಲ್ಲಿ, ಭೌತಿಕವಾಗಿ ಸ್ಥಳ ಪರಿಶೀಲಿಸಿ ಖಾತರಿಪಡಿಸಿಕೊಳ್ಳುವುದು).
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತರ ಸಂಪರ್ಕ ಕೇಂದ್ರ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.