ನವದೆಹಲಿ: ಜೀವ ವಿಮೆ ಮತ್ತು ಎರಡು ಲಕ್ಷ ರೂ.ವರೆಗಿನ ಅಪಘಾತ ವಿಮೆಯ ಪ್ರಯೋಜನಗಳನ್ನು ಪ್ರತಿ ಅಂಗನವಾಡಿ ಕಾರ್ಯಕರ್ತೆಗೆ ವಿಸ್ತರಿಸಲಾಗಿದೆ. ಪ್ರತಿ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ. ಈ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಲೋಕಸಭೆಯಲ್ಲಿ ಇಂದು ಪೂರಕ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ ಅಡಿಯಲ್ಲಿ ಈ ಕಾರ್ಮಿಕರಿಗೆ ಪಿಂಚಣಿ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಯುಪಿಎ ಆಡಳಿತಾವಧಿಯಲ್ಲಿ 750 ರೂ.ಗಳಿಂದ ಕಾರ್ಮಿಕರಿಗೆ 4,500 ರೂ.ಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಪ್ರತಿ ಸಮುದಾಯ ಆಧಾರಿತ ಕಾರ್ಯಕ್ರಮದ ಪ್ರಕಾರ, ಕಾರ್ಮಿಕರಿಗೆ 250 ರೂಪಾಯಿಗಳನ್ನು ನೀಡಲಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯು ಫಲಾನುಭವಿಯ ಮನೆಗೆ ಭೇಟಿ ನೀಡಿದರೆ ಅಥವಾ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ಮಗುವನ್ನು ಭೇಟಿಯಾದರೇ 500 ರೂಪಾಯಿಗಳನ್ನು ನೀಡಲಾಗುತ್ತದೆ ಎಂದು ಸ್ಮೃತಿ ಇರಾನಿ ಹೇಳಿದರು.
ಮತ್ತೊಂದೆಡೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದಂತ ಕೇಂದ್ರ ಮಧ್ಯಂತರ ಬಜೆಟ್-2024 ಮಂಡನೆಯ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು, ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆಯನ್ನು ವಿಸ್ತರಿಸಲಾಗುತ್ತದೆ ಎಂದು ಘೋಷಿಸಿದ್ದರು.