ಬೆಂಗಳೂರು: ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರ ಬಹು ದಿನಗಳ ಬೇಡಿಕೆ ಈಡೇರಿಸೋದಕ್ಕೆ ಸರ್ಕಾರ ಮುಂದಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಶೀಘ್ರವೇ ಜೀವವಿಮಾ ಯೋಜನೆ ಜಾರಿಗೊಳಿಸಲಾಗುತ್ತದೆ ಅಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬೆಂಗಳೂರಿನ ಮಡಿವಾಳದ ಸ್ತ್ರೀ ಶಕ್ತಿ ಭವನದಲ್ಲಿ ನಡೆದ ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಜಾರಿಯಾಗಲಿ, ಐಸಿಡಿಎಸ್ ಉಳಿಸಿ ಮಕ್ಕಳನ್ನು ರಕ್ಷಿಸಿ, ಸಂಘಟನೆ-ಸಂಘರ್ಷ-ಶಿಕ್ಷಣ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಶೀಘ್ರವೇ ಇನ್ಸೂರೆನ್ಸ್ ತೀರ್ಮಾನ
ಅಂಗನವಾಡಿ ಕಾರ್ಯಕರ್ತರಿಗೆ ಇನ್ಯುರೆನ್ಸ್ ನೀಡುವ ಕುರಿತು ಶೀಘ್ರವೇ ತೀರ್ಮಾನಿಸಲಾಗುವುದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚೆ ನಡೆಸಲಾಗುವುದು. ಗೌರವ ಧನ ಹೆಚ್ಚಳದ ಬಗ್ಗೆಯೂ ಸಿಎಂ ಜೊತೆಗೆ ಚರ್ಚಿಸಿದ್ದು, ಶೀಘ್ರವೇ ಕಾರ್ಯರೂಪಕ್ಕೆ ತರುವ ಕೆಲಸ ಆಗಲಿದೆ ಎಂದು ಸಚಿವರು ತಿಳಿಸಿದರು.
ಹೆಣ್ಣಿಗೆ ಹೋರಾಟವೇ ಮನೋಬಲ
ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಹೋರಾಟ ಮನೋಭಾವದಿಂದ ನಾನು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿರುವೆ. ಸಮಾಜದಲ್ಲಿ ಮಹಿಳೆಯರಿಗಿಂತ ಪುರುಷರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಗಂಡು ಮಕ್ಕಳಿಗೆ ಸಿಗುವ ಮರ್ಯಾದೆ ಹೆಣ್ಣುಮಕ್ಕಳಿಗೆ ಇರುವುದಿಲ್ಲ. ಇದು ಸಮಾಜದಲ್ಲಿ ಅಲ್ಲ, ಇದು ನಮ್ಮ ಮನೆಗಳಲ್ಲೇ ಅಧಿಕವಾಗಿದೆ. ಹೆಣ್ಣು ಮಕ್ಕಳು ಜೋರಾಗಿ ಮಾತಾಡಿದರೂ ಕಷ್ಟ. ಎಷ್ಟೋ ಕಷ್ಟಗಳನ್ನು ಮೆಟ್ಟಿನಿಂತು ಹೆಣ್ಣು ಸಮಾಜಕ್ಕೆ ಮಾದರಿಯಾಗಿ ಬದುಕುತ್ತಿದ್ದಾಳೆ ಎಂದರು.