ಬೆಂಗಳೂರು : ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯನ್ನು (ಪಿಎಂಎಫ್ ಎಂಇ) 1 ವರ್ಷ ವಿಸ್ತರಿಸಿದೆ. ಯೋಜನೆಯಡಿ ರಾಜ್ಯಕ್ಕೆ 5 ಸಾವಿರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆ ಗುರಿ ನೀಡಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿಗಾಗಿ PMFME ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ಅರಿವು ಮೂಡಿಸುವ ಸಭೆಯಲ್ಲಿ ಮಾತನಾಡಿದ ಅವರು, ಈ ಯೋಜನೆ ಅಡಿಯಲ್ಲಿ ಸಿರಿಧಾನ್ಯಗಳು, ಬೆಲ್ಲ, ಬೇಕರಿ ಉತ್ಪನ್ನಗಳು ಸೇರಿದಂತೆ ವಿವಿಧ ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಶೇ. 50 ಅಥವಾ ಗರಿಷ್ಠ ₹15 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ. ಇದರಲ್ಲಿ ಕೇಂದ್ರದ ₹6 ಲಕ್ಷ ಮತ್ತು ರಾಜ್ಯದ ₹9 ಲಕ್ಷ ಪಾಲು ಸೇರಿದ್ದು, ವೈಯಕ್ತಿಕ ಉದ್ದಿಮೆದಾರರು, ಗುಂಪುಗಳು ಮತ್ತು ಸ್ವಸಹಾಯ ಸಂಘಗಳಿಗೆ ಇದು ವರದಾನವಾಗಿದೆ. ಸ್ವಸಹಾಯ ಸಂಘಗಳ ಸದಸ್ಯರಿಗೆ ₹40,000 ವರೆಗೆ ಬೀಜ ಬಂಡವಾಳ ಮತ್ತು ಸಂಘಗಳಿಗೆ ₹4 ಲಕ್ಷದ ವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.
ಕೃಷಿಕರನ್ನು ಉದ್ಯಮಿಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿರುವ ಕೆಪೆಕ್, ಈ ಯೋಜನೆಯಡಿ ಕರ್ನಾಟಕದಲ್ಲಿ 11,910 ಉದ್ಯಮಗಳನ್ನು ಸ್ಥಾಪಿಸಲು/ಉನ್ನತೀಕರಿಸಲು ₹493 ಕೋಟಿ ಅನುದಾನ ಮೀಸಲಿಟ್ಟಿದೆ. ಇದು ವೈಯಕ್ತಿಕ ಉದ್ಯಮಿಗಳಿಗೆ 35% (60:40) ಸಬ್ಸಿಡಿ ಜೊತೆಗೆ ಕರ್ನಾಟಕ ಸರ್ಕಾರದಿಂದ 15% ಹೆಚ್ಚುವರಿ ಟಾಪ್-ಅಪ್ ಸಬ್ಸಿಡಿ ನೀಡುತ್ತದೆ ಎಂದು ತಿಳಿಸಿದ್ದಾರೆ.
ಈಗಾಗಲೇ 6,585 ಅರ್ಜಿಗಳಿಗೆ ಸಾಲ ಮಂಜೂರಾಗಿದ್ದು, ₹756.48 ಕೋಟಿ ಬಂಡವಾಳ ಹೂಡಿಕೆಯಾಗಿದೆ. 4,489 ಫಲಾನುಭವಿಗಳಿಗೆ ₹162.50 ಕೋಟಿ ಸಹಾಯಧನ ಹಾಗೂ 3,770 ಫಲಾನುಭವಿಗಳಿಗೆ ₹59.48 ಕೋಟಿ ಹೆಚ್ಚುವರಿ ಸಹಾಯಧನ ಬಿಡುಗಡೆ ಮಾಡಲಾಗಿದೆ. ಜೊತೆಗೆ, 5 ಬ್ರ್ಯಾಂಡಿಂಗ್ ಮಾರ್ಕೆಟಿಂಗ್ ಪ್ರಸ್ತಾವನೆಗಳು, 4 ಸಾಮಾನ್ಯ ಮೂಲಭೂತ ಸೌಕರ್ಯ ಘಟಕಗಳು ಮತ್ತು 14 ಇನ್ಕ್ಯುಬೇಷನ್ ಕೇಂದ್ರಗಳನ್ನು ಸ್ಥಾಪಿಸಿ, ರಾಜ್ಯದಲ್ಲಿ ಆಹಾರ ಸಂಸ್ಕರಣಾ ವಲಯದ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಸಬ್ಸಿಡಿಗಾಗಿ ಅರ್ಜಿ ಸಲ್ಲಿಸುವುದು ಹೇಗೆ?
ಪಿಎಂಎಫ್ಎಂಇ ಯೋಜನೆಯಡಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಲು 18 ವರ್ಷ ತುಂಬಿರಬೇಕು.
ಕನಿಷ್ಠ ವಿದ್ಯಾರ್ಹತೆ ಅಗತ್ಯವಿಲ್ಲ. ಉದ್ಯಮದ ಯಾವುದೇ ಅನುಭವದ ಅಗತ್ಯವಿಲ್ಲ.
ಆನ್ ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
ಆಸಕ್ತರು ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗಾಗಿ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪಕಿಸಬೇಕು ಅಥವಾ ಕೆಪೆಕ್ ಸಂಸ್ಥೆಯ ಯೋಜನಾ ನಿರ್ವಹಣಾ ಘಟಕಗಳನ್ನು ಸಂಪರ್ಕಿಸಬೇಕು.
ಹೆಚ್ಚಿನ ಮಾಹಿತಿಗಾಗಿ 99643 98062 / 97410 08486/ 88676 17858/ 97312 01215.