ಬೆಳಗಾವಿ : ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ಗೃಹ ಆರೋಗ್ಯ ಯೋಜನೆ ಜಾರಿಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಬೃಹತ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿಮಾತನಾಡಿದ ಸಚಿವರು, ಆರೋಗ್ಯ ಸೇವೆಗಳನ್ನ ಬಡ ವರ್ಗದ ಜನರ ಬಳಿಗೆ ತರುವಲ್ಲಿ ಉಚಿತ ಆರೋಗ್ಯ ತಪಾಸಣಾ ಮೇಳಗಳು ಯಶಸ್ವಿಯಾಗುತ್ತಿವೆ. ದೊಡ್ಡ ಮಟ್ಟದ ಆರೋಗ್ಯ ಮೇಳಗಳನ್ನು ಗ್ರಾಮೀಣ ಪ್ತದೇಶದ ಜನರಿಗೆ ಅನುಕೂಲಪಡಿಸಲು ತಾಲೂಕುಗಳಲ್ಲಿ ನಡೆಸಲಾಗುತ್ತಿದೆ. ಕೊಳ್ಳೆಗಾಲ, ಮಾನ್ವಿ ಬಳಿಕ ಇದೀಗ ಸವದತ್ತಿಯಲ್ಲೂ ಆರೋಗ್ಯ ಮೇಳ ಯಶಸ್ವಿಯಾಗಿದೆ ಎಂದರು.
ಇದೇ ವೇಳೆ ಸವದತ್ತಿ ತಾಲೂಕು ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನ 46 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಳಗಾವಿ ಜಿಲ್ಲೆಯ ರಾಮದುರ್ಗಾ ಹಾಗೂ ಕಿತ್ತೂರು ತಾಲೂಕು ಅಸ್ಪತ್ರೆಗಳಿಗೂ ಸುಸಜ್ಜಿತವಾದ ನೂತನ ಕಟ್ಟಡ ನಿರ್ಮಿಸಲಾಗುವುದು. ಅಲ್ಲದೇ ಬೆಳಗಾವಿ ಜಿಲ್ಲೆಯಲ್ಲಿ ಪ್ರತ್ಯೇಕ ಜಿಲ್ಲಾಸ್ಪತ್ರೆಯನ್ನ ಗೋಕಾಕ್ ನಲ್ಲಿ ನಿರ್ಮಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿಗಳನ್ನ ನೀಡುವುದರ ಜೊತೆಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ವಿಶೇಷವಾಗಿ ಆರೋಗ್ಯ ಕ್ಷೇತ್ರದಲ್ಲಿ ಈ ಬಾರಿಯ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸಿದ್ದಾರೆ. ಅಥಣಿಗೆ 50 ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆ ನೀಡಿದ್ದೇವೆ. ಆರೋಗ್ಯ ಸೇವೆಗಳಲ್ಲಿ ಸಾಕಷ್ಟು ಸುಧಾರಣೆ ತರುವತ್ತ ಸತತವಾಗಿ ಪ್ರಯತ್ನಿಸಲಾಗುತ್ತಿದೆ. ಬಡ ಜನರ ಪರ ಕಾಂಗ್ರೆಸ್ ಸರ್ಕಾರ ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಹಳ್ಳಿಗಾಡಿನ ಜನರು ಬಡವರು ತಮ್ಮ ಆರೋಗ್ಯ ತಪಾಸಣೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಬಾರದು.. ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳ ವಿಚಾರದಲ್ಲಿ ನಮ್ಮ ಜನರು ಎಚ್ಚರಿಕೆ ವಹಿಸುವ ಅಗತ್ಯತೆ ಇದೆ. ಆರಂಭಿಕ ಹಂತದಲ್ಲಿ ಈ ಕಾಯಿಲೆಗಳನ್ನ ಪತ್ತೆ ಹಚ್ಚಿದರೆ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಅಲ್ಲದೇ ಮುಂದೆ ಈ ಕಾಯಿಲೆಗಳಿಂದ ಎದುರಾಗುವ ಆಪತ್ತುಗಳಿಂದ ಬಡ ಜನರನ್ನ ಪಾರು ಮಾಡಬಹುದಾಗಿದೆ. ಹೀಗಾಗಿಯೇ ನಮ್ಮ ಕಾಂಗ್ರೆಸ್ ಸರ್ಕಾರ ಗೃಹ ಆರೋಗ್ಯ ಯೋಜನೆ ಜಾರಿಗೆ ತಂದಿದೆ. 30 ವರ್ಷ ಮೇಲ್ಪಟ್ಟ ರಾಜ್ಯದ ಎಲ್ಲ ಜನರನ್ನು ತಪಾಸಣೆಗೆ ಒಳಪಡಿಸಿ, ಉಚಿತವಾಗಿ ಔಷಧಿಗಳನ್ನ ಜನರ ಬಳಿಗೆ ಒದಗಿಸುವ ಯೋಜನೆ ಇದಾಗಿದೆ.
ಈಗಾಗಲೇ ಗೃಹ ಆರೋಗ್ಯ ಯೋಜನೆಯನ್ನ ಕೋಲಾರ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗೃಹ ಆರೋಗ್ಯ ಯೋಜನೆ ಜಾರಿಯಾಗಲಿದೆ. ನಮ್ಮ ಜನರು ಯೋಜನೆಯ ಲಾಭ ಪಡೆದುಕೊಳ್ಳಬೇಕು. ಜನರ ಮನೆ ಬಾಗಿಲಿಗೆ ಆರೋಗ್ಯ ಸಿಬ್ಬಂದಿಗಳು ಭೇಟಿ ನೀಡಿ, ರಕ್ತದೊತ್ತಡ, ಮಧುಮೇಹ ಕ್ಯಾನ್ಸರ್ ಸೇರಿದಂತೆ ಮಾನಸಿಕ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸಲಿದ್ದಾರೆ. ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಯಲ್ಲಿ ಗೃಹ ಆರೋಗ್ಯ ಯೋಜನೆ ದೊಡ್ಡ ಬದಲಾವಣೆಯನ್ನ ತರುವ ನಿರೀಕ್ಷೆಯಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.