ಬೆಂಗಳೂರು : ರಾಜ್ಯದಲ್ಲಿ 1,000 ಗ್ರಾಮ ಆಡಳಿತಾಧಿಕಾರಿಗಳು ಹಾಗೂ 750 ಸರ್ಕಾರಿ ಸರ್ವೇಯರ್ ಭರ್ತಿ ಪ್ರಕಿಯೆ ನಡೆದಿದೆ. ಇದರ ಜೊತೆಗೆ 100ಕ್ಕೂ ಅಧಿಕ ಪರವಾನಗಿ ಹೊಂದಿರುವ ಖಾಸಗಿ ಸರ್ವೇಯರ್ ಹಾಗೂ 35 ಎ.ಡಿ.ಎಲ್.ಆರ್ ನೇಮಕಾತಿಗೆ ಅರ್ಜಿ ಕರೆಯಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಯ ಬಗ್ಗೆ ವಿಧಾನಸಭೆಗೆ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ರಾಜ್ಯದಲ್ಲಿ 1,000 ಗ್ರಾಮ ಆಡಳಿತಾಧಿಕಾರಿಗಳು ಹಾಗೂ 750 ಸರ್ಕಾರಿ ಸರ್ವೇಯರ್ ಭರ್ತಿ ಪ್ರಕಿಯೆ ನಡೆದಿದೆ. ಇದರ ಜೊತೆಗೆ 100ಕ್ಕೂ ಅಧಿಕ ಪರವಾನಗಿ ಹೊಂದಿರುವ ಖಾಸಗಿ ಸರ್ವೇಯರ್ ಹಾಗೂ 35 ಎ.ಡಿ.ಎಲ್.ಆರ್ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಮುಂದಿನ 3 ರಿಂದ 6 ತಿಂಗಳ ಒಳಗಾಗಿ ಈ ಎಲ್ಲಾ ಹುದ್ದೆಗಳನ್ನೂ ನ್ಯಾಯಸಮ್ಮತವಾಗಿ ಭರ್ತಿ ಮಾಡುವಂತೆ ಕೆಪಿಎಸ್ಸಿ ಗೆ ಸೂಚಿಸಲಾಗಿ ಎಂದು ತಿಳಿಸಿದರು.
ಮುಂದುವರೆದು, “ಸರ್ವೇ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿದರೆ ಸ್ವಾಭಾವಿಕವಾಗಿ ಸರ್ವೇ ಇಲಾಖೆಗೆ ಬಲ ಬರಲಿದೆ. ಈ ಹುದ್ದೆಗಳಲ್ಲದೆ, ಹೆಚ್ಚುವರಿಯಾಗಿ ಹೊಸ ಹುದ್ದೆಗಳ ಸೃಷ್ಟಿಗೂ ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಿದ್ದು ಮತ್ತಷ್ಟು ಹುದ್ದೆಗಳನ್ನು ಸೃಷ್ಟಿಸಲು ಸರ್ಕಾರ ಸಿದ್ದವಾಗಿದೆ. ಇದರ ಜೊತೆಗೆ ನಮ್ಮ ಸಿಬ್ಬಂದಿಗಳ ಕೆಲಸದ ವೇಗ ಹೆಚ್ಚಾಗಲು ಮೂರು ಪಟ್ಟು ಸರ್ವೇ ಕೆಲದ ವೇಗ ಪಡೆಯಲು ಆಧುನಿಕ ಉಪಕರಣವಾದ ರೋವರ್ ಬಳಸಿ ಸರ್ವೇ ನಡೆಸಲೂ ಸೂಚಿಸಲಾಗಿದೆ. ಈ ಮೂಲಕ ರೈತರ ಸಮಸ್ಯೆಗಳನ್ನು ಬಗೆಹರಿಸುವ ಹಾಗೂ ಸರ್ವೇ ಇಲಾಖೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದರು.