ಬೆಂಗಳೂರು: ಜೀವನದಲ್ಲಿ ತುರ್ತು ಪರಿಸ್ಥಿತಿಗಳು ಯಾವಾಗ ಎದುರಾಗುತ್ತವೆ ಎಂದು ಹೇಳಲಾಗುವುದಿಲ್ಲ. ಹಠಾತ್ ವೈದ್ಯಕೀಯ ವೆಚ್ಚ, ಅನಿರೀಕ್ಷಿತ ಆರ್ಥಿಕ ಅಂತರ ಅಥವಾ ಮಗುವಿನ ಶಿಕ್ಷಣದಂತಹ ಸಂದರ್ಭಗಳಲ್ಲಿ ಹಣದ ಅವಶ್ಯಕತೆ ತಕ್ಷಣಕ್ಕೆ ಉದ್ಭವಿಸುತ್ತದೆ. ಇಂತಹ ಸಮಯದಲ್ಲಿ ಭಾರತೀಯ ಕುಟುಂಬಗಳ ಪಾಲಿಗೆ ಅತ್ಯಂತ ವಿಶ್ವಾಸಾರ್ಹ ಆಸ್ತಿಯಾಗಿ ಕಾಣುವುದು ‘ಚಿನ್ನ’.
ತಲೆಮಾರುಗಳಿಂದ ಚಿನ್ನವು ಕೇವಲ ಆಭರಣವಾಗಿ ಉಳಿದಿಲ್ಲ, ಅದೊಂದು ಭದ್ರತಾ ಜಾಲವೂ ಹೌದು. ಆದರೆ ಹಣದ ತುರ್ತು ಅಗತ್ಯವಿದ್ದಾಗ ಚಿನ್ನವನ್ನು ಮಾರಾಟ (Gold Sale) ಮಾಡುವುದು ಉತ್ತಮವೇ? ಅಥವಾ ಚಿನ್ನದ ಸಾಲ (Gold Loan) ಪಡೆಯುವುದು ಸೂಕ್ತವೇ? ಈ ಗೊಂದಲಕ್ಕೆ ಇಲ್ಲಿದೆ ಪಾರದರ್ಶಕ ಮಾಹಿತಿ.
ಚಿನ್ನದ ಮಾರಾಟ: ಸಾಧಕ-ಬಾಧಕಗಳೇನು?
ನಿಮ್ಮ ಬಳಿಯಿರುವ ಚಿನ್ನವನ್ನು ಮಾರಾಟ ಮಾಡುವುದರಿಂದ ಆ ಕ್ಷಣಕ್ಕೆ ಯಾವುದೇ ಬಡ್ಡಿಯ ಹೊರೆಯಿಲ್ಲದೆ ಪೂರ್ಣ ಮೌಲ್ಯದ ನಗದು ಸಿಗುತ್ತದೆ.
ಲಾಭ: ಯಾವುದೇ ಮಾಸಿಕ ಕಂತು (EMI) ಅಥವಾ ಹೆಚ್ಚುವರಿ ಶುಲ್ಕದ ಕಿರಿಕಿರಿ ಇರುವುದಿಲ್ಲ.
ನಷ್ಟ: ಒಮ್ಮೆ ಚಿನ್ನ ಮಾರಾಟವಾದರೆ ಅದು ನಿಮ್ಮ ಕೈಯಿಂದ ಶಾಶ್ವತವಾಗಿ ದೂರವಾಗುತ್ತದೆ. ಭಾವನಾತ್ಮಕವಾಗಿ ಬೆಸೆದಿರುವ ಆಭರಣಗಳಾಗಿದ್ದರೆ ಅಥವಾ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯಾದರೆ ನೀವು ಆ ಲಾಭದಿಂದ ವಂಚಿತರಾಗುತ್ತೀರಿ.
ಚಿನ್ನದ ಸಾಲ: ಆಸ್ತಿಯೂ ಉಳಿಯಲಿ, ಅಗತ್ಯವೂ ತೀರಲಿ
ನಿಮ್ಮ ಚಿನ್ನವನ್ನು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಅಡಮಾನವಿಟ್ಟು ಸಾಲ ಪಡೆಯುವುದು ಇಂದಿನ ದಿನಗಳಲ್ಲಿ ಅತ್ಯಂತ ಜನಪ್ರಿಯ ಮಾರ್ಗ.
ಲಾಭ: ನೀವು ಚಿನ್ನದ ಮಾಲೀಕರಾಗಿಯೇ ಇರುತ್ತೀರಿ. ಸಾಲ ಮತ್ತು ಬಡ್ಡಿಯನ್ನು ಮರುಪಾವತಿಸಿದ ನಂತರ ನಿಮ್ಮ ಆಭರಣಗಳು ನಿಮ್ಮ ಕೈ ಸೇರುತ್ತವೆ. ಅಲ್ಪಾವಧಿಯ ಆರ್ಥಿಕ ಬಿಕ್ಕಟ್ಟಿಗೆ ಇದು ಅತ್ಯುತ್ತಮ ಪರಿಹಾರ.
ನಷ್ಟ: ಪಡೆದ ಸಾಲಕ್ಕೆ ನೀವು ಬಡ್ಡಿ ಪಾವತಿಸಬೇಕಾಗುತ್ತದೆ. ನಿಗದಿತ ಸಮಯದಲ್ಲಿ ಸಾಲ ತೀರಿಸದಿದ್ದರೆ ಆಭರಣವನ್ನು ಕಳೆದುಕೊಳ್ಳುವ ಭೀತಿ ಇರುತ್ತದೆ.
ನೀವು ಯಾವುದನ್ನು ಆರಿಸಿಕೊಳ್ಳಬೇಕು?
ಒಂದು ನಿರ್ಧಾರಕ್ಕೆ ಬರುವ ಮೊದಲು ಈ ಕೆಳಗಿನ ಅಂಶಗಳನ್ನು ಗಮನಿಸಿ:
ಚಿನ್ನದ ಸಾಲ ಯಾವಾಗ ಪಡೆಯಬೇಕು?
ಹಣದ ಅಗತ್ಯ ಕೇವಲ ಅಲ್ಪಾವಧಿಗೆ ಇದ್ದರೆ.
ಸಾಲದ ಕಂತುಗಳನ್ನು ಅಥವಾ ಪೂರ್ಣ ಮೊತ್ತವನ್ನು ಮರುಪಾವತಿಸುವ ಆರ್ಥಿಕ ಸಾಮರ್ಥ್ಯ ನಿಮಗಿದ್ದರೆ.
ನಿಮ್ಮ ಚಿನ್ನವು ಭಾವನಾತ್ಮಕ ಮೌಲ್ಯ ಹೊಂದಿದ್ದು, ಅದನ್ನು ಕಳೆದುಕೊಳ್ಳಲು ಇಷ್ಟವಿಲ್ಲದಿದ್ದರೆ.
ಚಿನ್ನ ಮಾರಾಟ ಮಾಡುವುದು ಯಾವಾಗ ಸೂಕ್ತ?
ಸಾಲದ ಮಿತಿ ಮೀರಿ ದೊಡ್ಡ ಮೊತ್ತದ ಹಣದ ಅಗತ್ಯವಿದ್ದಾಗ.
ಭವಿಷ್ಯದಲ್ಲಿ ಸಾಲ ಮರುಪಾವತಿ ಮಾಡಲು ಸಾಧ್ಯವಿಲ್ಲ ಎಂದು ನಿಮಗೆ ಮೊದಲೇ ತಿಳಿದಿದ್ದರೆ.
ಬಡ್ಡಿಯ ಹೊರೆ ಬೇಡವೇ ಬೇಡ ಎಂದು ನಿರ್ಧರಿಸಿದ್ದರೆ.
ತಜ್ಞರ ಸಲಹೆ: ಅಲ್ಪಾವಧಿಯ ಅಗತ್ಯಗಳಿಗಾಗಿ ಚಿನ್ನದ ಸಾಲ ಪಡೆಯುವುದು ಬುದ್ಧಿವಂತಿಕೆಯ ನಿರ್ಧಾರ. ಇದು ನಿಮ್ಮ ಆಸ್ತಿಯನ್ನು ಉಳಿಸುವುದಲ್ಲದೆ, ನಿಮ್ಮ ಕ್ರೆಡಿಟ್ ಸ್ಕೋರ್ ವೃದ್ಧಿಗೂ ಸಹಕಾರಿ. ಆದರೆ ದೀರ್ಘಕಾಲದವರೆಗೆ ಮರುಪಾವತಿ ಅಸಾಧ್ಯವೆಂದಾದಾಗ ಮಾತ್ರ ಚಿನ್ನ ಮಾರಾಟದ ಹಾದಿ ಹಿಡಿಯುವುದು ಸೂಕ್ತ.








