ಮಂಡ್ಯ : ಮದ್ದೂರು ನಗರದ ಸೋಮೇಗೌಡರ ಬೀದಿಯಲ್ಲಿ ಭಾನುವಾರ ತಡರಾತ್ರಿ ಮನೆಗಳ್ಳತನವೊಂದು ನಡೆದಿದ್ದು, ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಹಾಗೂ 1 ಲಕ್ಷ ರೂ ಹಣದೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ.
ಸೋಮೇಗೌಡರ ಬೀದಿಯ ಪೂರ್ಣಿಮ ಬಸವಯ್ಯ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ.
ಮಂಗಳೂರಿನಲ್ಲಿ ತಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರ ಯೋಗಕ್ಷೇಮ ವಿಚಾರಿಸಲು ತೆರಳಿದ್ದ ವೇಳೆ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಭಾನುವಾರ ತಡರಾತ್ರಿ ಮನೆಗೆ ನುಗ್ಗಿ ಕಳ್ಳರು ಸುಮಾರು 60 ಗ್ರಾಂ ಚಿನ್ನಾಭರಣ 1 ಲಕ್ಷ ರೂ ಹಣದೊಂದಿಗೆ ಪರಾರಿಯಾಗಿದ್ದಾರೆ.
ಸೋಮವಾರ ಬೆಳಿಗ್ಗೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಮದ್ದೂರು ಠಾಣೆಯ ಪೋಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಯಶವಂತ್ ಕುಮಾರ್, ಮದ್ದೂರು ಪೋಲೀಸ್ ಇನ್ಸ್ಪೆಕ್ಟರ್ ಹೆಚ್.ಎಸ್.ನವೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ








