ಶಿವಮೊಗ್ಗ: ಗೆಲುವು ಬಂದಾಗ ಎಲ್ಲವೂ ನಾನು, ನನ್ನಿಂದ ಎನ್ನುವ ಮನುಷ್ಯ ಸೋತಾಗ ಹಣೆ ಬರಹ, ವಿಧಿ ಲಿಖಿತ ಎಂಬ ಶಬ್ದ ಬಳಸುತ್ತಾನೆ ಆದರೆ ನಿಜವಾಗಿಯೂ ಗೆಲುವು ಮತ್ತು ಸೋಲು ಎಲ್ಲವೂ ಭಗವಂತನ ಇಚ್ಚೆ. ಗೆದ್ದಾಗಲೂ ಅವನನ್ನೇ ಸ್ಮರಿಸಬೇಕು ಇನ್ನು ಸೋತಾಗ ಹೇಗೂ ಭಗವಂತನ ನೆನಪು ಮಾಡಲೇ ಬೇಕು ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಶಿವಮೊಗ್ಗದ ಸಾಗರದ ಶ್ರೀ ರಾಘವೇಶ್ವರ ಸಭಾ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ನವರಾತ್ರ ನಮಸ್ಯಾದ 9 ನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಅವರು ನುಡಿದರು.
ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ರಕ್ಕಸರ ಮನಸ್ಥಿತಿ ಎಲ್ಲ ಕಡೆಯೂ ವ್ಯಾಪಿಸುತ್ತಿದೆ. ಹೇಳಿಕೇಳಿ ಅವರು ನಿಶಾಚರಿಗಳು. ನಾವುಗಳು ಅದೇ ದಾರಿ ಹಿಡಿಯುತ್ತಿರುವುದು ವಿಪರ್ಯಾಸ. ಪ್ರಕೃತಿಯೇ ಹಗಲು ಮತ್ತು ರಾತ್ರಿಯ ವ್ಯವಸ್ಥೆ ಮಾಡಿದೆ. ರಾತ್ರಿ ಎಂದರೆ ಅದು ವಿಶ್ರಾಂತಿಯ ಹೊತ್ತು. ಆದರೆ ಪ್ರಕೃತಿಗೆ ವಿರುದ್ದವಾಗಿ ರಾತ್ರಿ ಎಚ್ಚರವಿದ್ದು, ಹಗಲು ಮಲಗುವ ಅನಿವಾರ್ಯವಲ್ಲದ ಸ್ಥಿತಿಯನ್ನು ನಾವು ತಂದುಕೊಳ್ಳುತ್ತಿದ್ದೇವೆ ಎಂದ ಅವರು, ಸಹಜತೆಗೆ ಪ್ರಮುಖ್ಯತೆ ನೀಡಬೇಕು ಎಂದರು.
ಮರೆಯಬೇಕಾಗಿರುವುದನ್ನು ಮರೆಸುವುದು ಹಾಗೂ ಮರೆಯಬಾರದನ್ನು ಮೆರೆಸುವುದು ದೇವಿಯ ಕೈಯಲ್ಲಿದೆ. ದೇವಿಯರ ಆಶೀರ್ವಾದ ನಿತ್ಯ ಇದ್ದರೆ ಪ್ರಕೃತಿಯಲ್ಲಿಯ ಸಹಜ ಬದುಕು ನಮ್ಮದಾಗಲಿದೆ ಎಂದರು.
ಉಚ್ಚನ್ಯಾಯಾಲಯದ ನ್ಯಾಯವಾದಿ ಶಂಭು ಶರ್ಮಾ ಕಬ್ಬಿನಹಿತ್ಲು, ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಆಯುಕ್ತ ಎಚ್.ಕೆ. ನಾಗಪ್ಪ, ಎಂ.ಡಿ.ಎಫ್ ಅಧ್ಯಕ್ಷ ಬಿ.ಆರ್. ಜಯಂತ್, ಶಾಸಕರ ಆಪ್ತ ಕಾರ್ಯದರ್ಶಿ ಶ್ರೀನಿವಾಸಮೂರ್ತಿ, ಆಪ್ಸ್‍ಕೋಸ್ ಅಧ್ಯಕ್ಷ ಇಂದುಧರ ಗೌಡ, ವೃತ್ತ ನಿರೀಕ್ಷಕ ಪುಲ್ಲಯ್ಯ ಶ್ರೀಗಳವರಿಂದ ಆಶ್ರೀರ್ವದ ಪಡೆದರು.
ಇದಕ್ಕೂ ಮುನ್ನ ನವರಾತ್ರ ನಮಸ್ಯಾ ಸಮಿತಿಯಿಂದ ಕೊಡ ಮಾಡಿದ ಸಮಾಜ ಗೌರವವನ್ನು ಸಾರಸ್ವತ ಸಮಾಜ, ಮಾಧ್ವ ಸಮಾಜ,ಸ್ಮಾರ್ಥ ಸಮಾಜ, ಸವಿತಾ ಸಮಾಜ ,ಭೋವಿ ಸಮಾಜದ ಪರವಾಗಿ ಅಧ್ಯಕ್ಷರಾದ ಅರುಣ್ ಕುಮಾರ್ ಬಸ್ರೂರು, ವೆಂಕಟೇಶ್ ಕಟ್ಟಿ, ವಿನಾಯಕ ಜೋಷಿ, ರಂಜಿತ್‍ಕುಮಾರ್, ವೆಂಕಟೇಶ್ ಮತ್ತು ಪೌರ ಕಾರ್ಮಿಕರ ಪರವಾಗಿ ಸಂಘದ ಅಧ್ಯಕ್ಷ ನಾಗರಾಜ್ ಗೌರವ ಸ್ವೀಕರಿಸಿದರು. ಮಾತೃತ್ವಂ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಹಾರೆಕೆರೆ ನಾರಾಯಣ ಭಟ್, ಬಿ.ಕೆ. ಲಕ್ಷ್ಮಿನಾರಾಯಣ ಕೌಲಕೈ, ಮಧು ಶಿರೂಮನೆ, ಗುರುದೊಂಬೆ, ಜಯಂತ್ ಖಂಡಿಕಾ, ಸತೀಶ್ ಭಟ್, ಸೀತಾರಾಂಭಟ್, ಸುಬ್ರಮಣ್ಯ ಐಸಿರಿ, ಎಂ.ಜಿ.ರಾಮಚಂದ್ರ, ರಮೇಶ್ ಹೆಗಡೆ ಗುಂಡೂಮನೆ, ಶ್ರೀನಾಥಸಾರಂಗ ಮತ್ತಿತರರು ಇದ್ದರು.
ಇದಕ್ಕೂ ಮುನ್ನ ಬೆಳಗ್ಗೆ ನಿಶುಂಭಹಾ ಉಪಾಸನೆ, ಅಂಬಿಕಾ ದುರ್ಗಾ ಹವನ, ಚಂಡಿಕಾ ಹವನ, ಶ್ರೀಪೂಜೆ, ಕುಂಕುಮಾರ್ಚನೆ, ಉಡಿ ಹಾಗೂ ಸ್ತೋತ್ರ ಸಮರ್ಪಣೆ, ಸುವರ್ಣ ಪಾದುಕಾ ಪೂಜೆ, ಭಜನೆ, ಲಲಿತಾ ಅಷ್ಟೋತ್ತರ ನಡೆಯಿತು. ಸಂಜೆ ದುರ್ಗಾದೀಪ ನಮಸ್ಕಾರ, ರಾಜರಾಜೇಶ್ವರಿ ಪೂಜೆ ಹಾಗೂ ಚಂಡಿಕಾ ಪಾರಾಯಣ ನೆರವೇರಿತು.
ಹೀಗಿದೆ ಇಂದಿನ ಸಿಎಂ ಸಿದ್ಧರಾಮಯ್ಯ ಅವರ ‘ವೈಮಾನಿಕ ಸಮೀಕ್ಷೆ’ಯ ನಂತ್ರದ ಸಭೆಯ ಪ್ರಮುಖ ಹೈಲೈಟ್ಸ್