ಬೆಂಗಳೂರು: ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆ ಲೂಟಿ ಮಾಡುವ ಉದ್ದೇಶವನ್ನು ಹೊಂದಿದೆ. ಇದು ಹಣ ಕೊಳ್ಳೆ ಹೊಡೆಯುವ ಸ್ಕೀಮ್ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಿಎಂ ಕುರ್ಚಿಯ ಕಿತ್ತಾಟದಲ್ಲಿ ನಿರತರಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ ಊಟ ನೀಡುವ ಯೋಜನೆ ತರಲಾಗಿದೆ. ಬೀದಿನಾಯಿಗಳ ಉಪಟಳದಿಂದ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಅದಕ್ಕಾಗಿ ನಾಯಿಗಳ ಸಂಖ್ಯೆ ಕಡಿಮೆ ಮಾಡಬೇಕು ಎಂಬ ಉದ್ದೇಶದ ಯೋಜನೆ ಬಿಬಿಎಂಪಿಯಲ್ಲಿದೆ. ಜನರು ಹಾಗೂ ಸಂಘಟನೆಗಳು ಈಗಾಗಲೇ ಬೀದಿನಾಯಿಗಳಿಗೆ ಊಟ ಹಾಕುತ್ತಿದ್ದಾರೆ. ಈಗ ಬೌ ಬೌ ಬಿರಿಯಾನಿ ಹಾಕುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದರು.
ಪ್ರತಿ ಬೀದಿಗಳಲ್ಲಿ ಜನರು ಬೀದಿನಾಯಿಗಳಿಗೆ ಊಟ ಹಾಕುವುದು ಸಾಮಾನ್ಯವಾಗಿದೆ. ಈಗ ಹಣ ಲೂಟಿ ಮಾಡಲು ಇಂತಹ ಯೋಜನೆ ತರಲಾಗಿದೆ. ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದೆ. ಉದ್ಯಾನಗಳ ನಿರ್ವಹಣೆ ಆಗುತ್ತಿಲ್ಲ. ಬಿಬಿಎಂಪಿ ಆಸ್ಪತ್ರೆಗಳಲ್ಲಿ ಸಂಬಳ ಕೊಡಲು ಹಣವಿಲ್ಲ. ಶಾಲೆಗಳ ಶಿಕ್ಷಕರಿಗೆ ಸಂಬಳ ನೀಡುತ್ತಿಲ್ಲ. ಯಾವುದಕ್ಕೂ ಹಣ ಇಲ್ಲ ಎಂದಾಗಿರುವಾಗ, ಬೀದಿನಾಯಿಗಳಿಗೆ ಬಿರಿಯಾನಿ ನೀಡಿ, ಅದರಲ್ಲಿ ಹಣ ಕೊಳ್ಳೆ ಹೊಡೆಯುವ ಸ್ಕೀಮ್ ತರಲಾಗಿದೆ ಎಂದರು.
ಬೀದಿನಾಯಿಗಳ ಆರೋಗ್ಯದ ಆರೈಕೆಗೆ ಪಶು ಆಸ್ಪತ್ರೆ ನಿರ್ಮಿಸಬಹುದಿತ್ತು. ಬೀದಿ ಬದಿಯಲ್ಲಿ ಬಿದ್ದಿರುವ ನಾಯಿ ಅಥವಾ ಅಪಘಾತಕ್ಕೊಳಗಾದ ನಾಯಿಗಳನ್ನು ತಂದು ಚಿಕಿತ್ಸೆ ನೀಡಬಹುದು. ಅದನ್ನು ಬಿಟ್ಟು ಆಹಾರ ನೀಡುವ ಯೋಜನೆ ತಂದಿರುವುದು ಸರಿಯಲ್ಲ. ಬೀದಿನಾಯಿಗಳಿಗೆ ಮಾಂಸ ನೀಡುವುದರಿಂದ ಅವು ಕ್ರೂರವಾಗಿ ವರ್ತಿಸಬಹುದು. ಈಗಾಗಲೇ ನಮ್ಮ ಸಾಮಾನ್ಯ ಆಹಾರಕ್ಕೆ ಹೊಂದಿಕೊಂಡಿರುವ ಅವುಗಳಿಗೆ ಇಂತಹ ಆಹಾರ ನೀಡುವುದರಿಂದ ಸಮಸ್ಯೆ ಉಂಟಾಗಬಹುದು. ಬಿಬಿಎಂಪಿಯ ಹಣವನ್ನು ತಿನ್ನಲು ದಾರಿ ಹುಡುಕಿಕೊಂಡಿದ್ದಾರೆ. ಬೆಕ್ಕು, ಹೆಗ್ಗಣಗಳಿಗೂ ಊಟ ನೀಡಬಹುದು ಎಂದರು.
ಈ ಯೋಜನೆಯಲ್ಲಿ ಇನ್ನು ಮುಂದೆ ಹಗರಣವಾಗಲಿದೆ. ಆಗ ಯಾವುದೋ ತನಿಖಾ ಸಮಿತಿಯನ್ನು ನೇಮಿಸುತ್ತಾರೆ. ಕೊನೆಗೆ ವರದಿ ಮುಚ್ಚಿಹೋಗುತ್ತದೆ. ಇಂತಹ ಅಕ್ರಮಗಳಿಗೆ ಇದು ಕಾರಣವಾಗಲಿದೆ ಎಂದರು.
ಬೆಂಗಳೂರಿನ ಕಾಲ್ತುಳಿತ ಪ್ರಕರಣಕ್ಕೆ ಸರ್ಕಾರ ಅನುಮತಿ ನೀಡಿದೆ. ಆದರೆ ಪೊಲೀಸರನ್ನು ಬಲಿಪಶು ಮಾಡಲಾಗಿದೆ. ಆಯುಕ್ತರು, ಡಿಸಿಪಿ ಮೇಲೆ ಆರೋಪ ಹೊರೆಸಿ ಕೈ ತೊಳೆದುಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಸಚಿವರು ಎಲ್ಲ ಬಂದೋಬಸ್ತ್ ಮಾಡಿದ್ದರೆ, ಈ ಸಮಸ್ಯೆ ಆಗುತ್ತಿರಲಿಲ್ಲ. ಏನೂ ಮಾಡದೆ ಪೊಲೀಸರ ಮೇಲೆ ತಪ್ಪು ಹೊರಿಸಲಾಗಿದೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ತಪ್ಪು ಕೂಡ ಇಲ್ಲ. ಸರ್ಕಾರದ ಮೇಲೆ ಆರೋಪ ಬರಬಾರದೆಂದು ಮೊದಲೇ ಹೇಳಿ ವರದಿ ಬರೆಸಲಾಗಿದೆ. ಇದು ಯೋಗ್ಯವಾದ ವರದಿ ಅಲ್ಲ. ಕೋರ್ಟ್‌ನಲ್ಲಿ ಬರುವ ತೀರ್ಪಿನ ಬಗ್ಗೆ ಮಾತ್ರ ನಂಬಿಕೆ ಇದೆ ಎಂದರು.
ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತೇನೆ ಎಂದು ತಿಳಿದು ದೇವಾಲಯಗಳನ್ನು ಸುತ್ತುತ್ತಿದ್ದಾರೆ. ಬದಲಾವಣೆ ಬಗ್ಗೆ ಹೈಕಮಾಂಡ್‌ನಲ್ಲಿ ಚರ್ಚೆಯಾಗಿದೆ. ಡಿ.ಕೆ.ಶಿವಕುಮಾರ್ ಪಟ್ಟು ಬಿಡದೆ ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತಾರೆ. ಸಿಎಂ ಬದಲಾವಣೆ ಖಂಡಿತ ಆಗಲಿದೆ ಎಂದರು.
KSRTC ಮುಡಿಗೇರಿದ ಮತ್ತೊಂದು ಕಿರೀಟ: ET HRWorld Employee Experience ರಾಷ್ಟ್ರೀಯ ಪ್ರಶಸ್ತಿ
KSRTC ಮುಡಿಗೇರಿದ ಮತ್ತೊಂದು ಕಿರೀಟ: ET HRWorld Employee Experience ರಾಷ್ಟ್ರೀಯ ಪ್ರಶಸ್ತಿ