ಮಂಡ್ಯ : ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದ ಪುರಾಣ ಪ್ರಸಿದ್ಧ ಶ್ರಿ ತೋಪಿನ ತಿಮ್ಮಪ್ಪನ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಬಾರದು. ಎಂದಿನಂತೆ ತೋಪಿನ ತಿಮ್ಮಪ್ಪ ಸೇವಾ ಟ್ರಸ್ಟ್ ವತಿಯಿಂದಲೇ ನಡೆಯುವಂತೆ ಅಧಿಕಾರಿಗಳು ಅವಕಾಶ ಕೋಡಬೇಕೆಂದು ಒತ್ತಾಯಿಸಿ ದೇಗುಲದ ಮುಂದೆ ಗ್ರಾಮಸ್ಥರು ಹಾಗೂ ಮಹಿಳೆಯರು ಮಂಗಳವಾರ ಪ್ರತಿಭಟನೆ ಮಾಡಿದರು.
ಟ್ರಸ್ಟ್ ಅಧ್ಯಕ್ಷ ಟಿ.ಕೃಷ್ಣೇಗೌಡ ಮಾತನಾಡಿ, ಶ್ರೀ ತೋಪಿನ ತಿಮ್ಮಪ್ಪ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. 2008 ರಲ್ಲಿ ಅಂದು ಶಾಸಕರಾಗಿದ್ದ ಡಿ.ಸಿ.ತಮ್ಮಣ್ಣ, ಭಕ್ತಾಧಿಗಳು, ಗ್ರಾಮಸ್ಥರು ಹಾಗೂ ದಾನಿಗಳು ಸೇರಿಕೊಂಡು ದೇಗುಲವನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ಅದ್ದೂರಿಯಾಗಿ ಜೀರ್ಣೋದ್ಧಾರ ಮಾಡಲಾಗಿತ್ತು, ಆ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ 272 ಜೋಡಿ ಸರಳ ವಿವಾಹ ಮಾಡಲಾಗಿತ್ತು ಎಂದರು.
ತೋಪಿನ ತಿಮ್ಮಪ್ಪ ಸೇವಾ ಟ್ರಸ್ಟ್ ಅಂದಿನಿಂದ ಇಂದಿನವರೆಗೆ ದೇಗುಲವನ್ನು ಉತ್ತಮವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿಯೊಂದಕ್ಕೂ ಪಾರದರ್ಶಕವಾಗಿ ಹಾಗೂ ಕಾನೂನಿನ ಪ್ರಕಾರವಾಗಿ ಲೆಕ್ಕಚಾರ ಮಾಡಿಕೊಂಡು ಬರಲಾಗುತ್ತಿದೆ. ಟ್ರಸ್ಟ್ನಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ದುರುಪಯೋಗವಾಗಿಲ್ಲ ಈ ಬಗ್ಗೆ ಯಾರು ಬೇಕಾದರು ಬಂದು ಪರಿಶೀಲಿಸಬಹುದು ಎಂದರು.
ಟ್ರಸ್ಟ್ ಹಾಗೂ ಗ್ರಾಮಸ್ಥರ ವತಿಯಿಂದ ಪ್ರತಿ ವರ್ಷ ಆಷಾಢ ಮಾಸದಲ್ಲಿ ಸುಮಾರು 50 ಸಾವಿರ ಕ್ಕೂ ಹೆಚ್ಚಿನ ಭಕ್ತಾಧಿಗಳಿಗೆ ತಾವರೆ ಎಲೆ ಊಟ ಉಣ ಬಡಿಸುವುದು ವಿಶೇಷ ಹಾಗೂ ಪ್ರತಿ ಹಬ್ಬ ಹಾಗೂ ವಿಶೇಷ ದಿನದಂದು ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಟ್ರಸ್ಟ್ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ತೋಪಿನ ತಿಮ್ಮಪ್ಪ ದೇಗುಲವು ಸಿ ದರ್ಜೆಗೆ ಸೇರಿದೆ ಎಂಬ ಒಂದೇ ಕಾರಣಕ್ಕೆ ಅಧಿಕಾರಿಗಳು ಮುಜರಾಯಿ ಇಲಾಖೆಗೆ ಸೇರಿಸಲು ಮುಂದಾಗಿರುವುದು ಸರಿಯಲ್ಲ. ಇದಕ್ಕೆ ಗ್ರಾಮಸ್ಥರು, ಮಹಿಳೆಯರು ಹಾಗೂ ಭಕ್ತಾಧಿಗಳು ಎಂದಿಗೂ ಅವಕಾಶ ಕೊಡುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಗ್ರಾಮದ ಶ್ರೀಕಂಠಯ್ಯ ಎಂಬುವರು ಶ್ರೀ ತೋಪಿನ ತಿಮ್ಮಪ್ಪ ಸೇವಾ ಟ್ರಸ್ಟ್ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು, ಶ್ರೀಕಂಠಯ್ಯ ತೋಪಿನ ತಿಮ್ಮಪ್ಪ ಸೇವಾ ಟ್ರಸ್ಟ್ ಗೆ 10 ವರ್ಷ ಸಹ ಕಾರ್ಯದರ್ಶಿಯಾಗಿ, 2 ವರ್ಷ ಉಪಾಧ್ಯಕ್ಷರಾಗಿ ಹಾಗೂ 11 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಅವದಿಯಲ್ಲೆ ಶ್ರೀ ತೋಪಿನ ತಿಮ್ಮಪ್ಪ ದೇಗುಲದ ಜೀಣೋದ್ಧಾರಗೊಂಡಿದ್ದು ಎಂದರು. ಶ್ರೀಕಂಠಯ್ಯ ಅವರು ಟ್ರಸ್ಟ್ ಗೆ ಸೇರಿದ್ದ ಸುಮಾರು ಎರಡುವರೆ ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಲು ಮುಂದಾಗಿದ್ದರು. ಈ ವೇಳೆ ಟ್ರಸ್ಟ್ ಪದಾಧಿಕಾರಿಗಳು ನೀವು ಮನೆ ಕಟ್ಟುತ್ತಿರುವ ಸ್ಥಳ ಟ್ರಸ್ಟ್ ಗೆ ಸೇರಿದ್ದು ಅದನ್ನು ಬಿಟ್ಟುಕೊಡಿ ಎಂದು ಕೇಳಿದಕ್ಕೆ ಟ್ರಸ್ಟ್ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಟಿ.ರವೀಂದ್ರ, ಖಜಾಂಚಿ ರಾಮಕೃಷ್ಣ, ಗ್ರಾಮದ ಮುಖಂಡರಾದ ಸುರೇಶ್, ವೀರಣ್ಣ, ತಿಮ್ಮೇಶ್, ಎ.ಟಿ.ಕರಿಗೌಡ, ರಮೇಶ್, ಜಯಣ್ಣ, ಲಕ್ಷ್ಮಮ್ಮ, ಸಾವಿತ್ರಮ್ಮ, ಸರಸ್ವತಿ, ಲಿಂಗಮ್ಮ, ಚಂದ್ರಮ್ಮ, ಶೋಭಾ, ಪುಟ್ಟಸ್ವಾಮಿ, ಭಾಗ್ಯಮ್ಮ ಸೇರಿದಂತೆ ಇತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








