ಮಂಡ್ಯ : ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಮದ್ದೂರು ನಗರಸಭೆಗೆ ಸೇರಿಸಿರುವುದನ್ನು ವಿರೋಧಿಸಿ ಸ್ಥಳೀಯ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವು 8 ನೇ ದಿನವನ್ನು ಪೂರೈಸಿದೆ.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾ.ಪಂ.ಕಚೇರಿ ಮುಂಭಾಗ ನೂರಾರು ಸಂಖ್ಯೆಯ ನಿವಾಸಿಗಳು ಪಂಚಾಯಿತಿಯನ್ನು ನಗರಸಭೆಯನ್ನಾಗಿಸಲು ಮೇಲ್ದರ್ಜೆಗೆರಿಸಿರುವ ಶಾಸಕರ ವಿರುದ್ಧ ಘೋಷಣೆ ಕೂಗಿ ಸೋಮವಾರ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಅವರು, ಗ್ರಾಮ ಪಂಚಾಯಿತಿಯ ಅಧಿಕಾರಾವಧಿಯು ಇನ್ನು ಒಂದು ತಿಂಗಳು ಇದೆ. ಆದರೆ, ಗ್ರಾಮ ಪಂಚಾಯಿತಿಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆರಿಸಿರುವ ಹಿನ್ನೆಲೆಯಲ್ಲಿ ನಮ್ಮ ಅಧಿಕಾರವನ್ನು ಬಲವಂತವಾಗಿ ಮೊಟಕುಗೊಳಿಸುವ ಮೂಲಕ ಸ್ಥಳೀಯ ಜನಪ್ರತಿನಿಧಿಗಳಿಗೆ ಅವಮಾನ ಮಾಡಲಾಗಿದೆ ಎಂದು ದೂರಿದರು.
ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೆರಿಸುವಾಗ ಜನಪ್ರತಿನಿಧಿಗಳಿಗೆ ಯಾವುದೇ ಮಾಹಿತಿಯನ್ನು ಅಧಿಕಾರಿಗಳು ಕೂಲಂಕಷವಾಗಿ ನೀಡಲಿಲ್ಲ. ಕೆಲ ಸದಸ್ಯರು ಅವಿದ್ಯಾವಂತರಾಗಿರುವ ಪರಿಣಾಮ ನಗರಸಭೆಯಿಂದಾಗುವ ಅನಾನುಕೂಲಗಳ ಬಗ್ಗೆ ಅರಿವಿಲ್ಲದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯ ನಡವಳಿಯಲ್ಲಿ ಸಹಿ ಹಾಕಿದ್ದರಿಂದ ಗ್ರಾಮ ಪಂಚಾಯಿತಿಯಿಂದ ಅನುಮೋದನೆ ಆಗಿದೆ ಎಂದು ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದರು.
ನಗರಸಭೆಗೆ ಸೇರ್ಪಡೆಯಾಗುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳು ಕೈತಪ್ಪಲಿದ್ದು ನರೇಗಾ, ಗ್ರಾಮೀಣ ಕೃಪಾಂಕ ರದ್ದು ಇನ್ನಿತರ ಮೂಲ ಸೌಲಭ್ಯಗಳಿಂದ ವಂಚಿತವಾಗಲಿದ್ದು, ಶಾಸಕರು ತಮ್ಮ ಅನುದಾನದಲ್ಲಿ ಅಭಿವೃದ್ಧಿಯನ್ನು ಮಾಡಿದರೆ ತಾವು ಸಹ ಕೈಜೋಡಿಸಲಿದ್ದೇವೆ. ಆದರೆ ನಗರೀಕರಣ ಹೆಸರಿನಲ್ಲಿ ಗ್ರಾಮದ ಜನರಿಗೆ ಮೋಸವೆಸಗುತ್ತಿದ್ದು, ಏಕ ಪಕ್ಷೀಯ ನಿರ್ಧಾರ ಕೈಗೊಂಡು ವಿರೋಧದ ನಡುವೆಯೂ ನಗರಸಭೆಯನ್ನಾಗಿಸಲು ಹೊರಟರೆ ಮುಂದಾಗುವ ಅನಾಹುತಕ್ಕೆ ಶಾಸಕರೇ ನೇರ ಹೊಣೆಯಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆ ವೇಳೆ ಗ್ರಾ.ಪಂ. ಸದಸ್ಯರಾದ ಭಾಗ್ಯ, ಜಯಮ್ಮ, ಲಕ್ಷ್ಮಮ್ಮ, ಮುಖಂಡರಾದ ಸುನಂದಾ ಜಯರಾಂ, ಶಂಕರ್, ಚಂದ್ರಶೇಖರ್, ವೀರಪ್ಪ, ತಾ.ಪಂ ಮಾಜಿ ಅಧ್ಯಕ್ಷ ಯೋಗೇಶ್, ಜಿ.ಟಿ.ವೀರಪ್ಪ, ಲಿಂಗಪ್ಪಾಜಿ, ಕೃಷ್ಣಪ್ಪ, ಪುಟ್ಟಸ್ವಾಮಿ, ಯೋಗೇಶ್, ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು ಕುವೆಂಪು: ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ
ದಾವಣಗೆರೆ: ನಾಳೆ ಹೊನ್ನಾಳಿ ತಾಲ್ಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut








