ಬೆಂಗಳೂರು: ನಗರದಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಠಿಣ ಕ್ರಮಕ್ಕೆ ಮುಂದಾಗಿದೆ.
ಹೌದು, ನಗರದಲ್ಲಿ ನಡೆಯುವ ವಿವಾಹ ಮಹೋತ್ಸವ, ಸಮಾರಂಭಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಬಳಸುತ್ತಿದ್ದು, ಇದನ್ನು ತಡೆಯಲು ಜಿಬಿಎ ಮಹತ್ವದ ಕ್ರಮ ಕೈಗೊಂಡಿದೆ. ನಿಯಮ ಉಲ್ಲಂಘಿಸುವವರಿಗೆ ಆರಂಭದಲ್ಲಿ ₹3,500 ದಂಡ ವಿಧಿಸಲಾಗುವುದು. ಪದೇ ಪದೇ ನಿಯಮ ಉಲ್ಲಂಘಿಸಿದರೆ ಗರಿಷ್ಠ ₹5 ಲಕ್ಷದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಮದುವೆ ಸಮಾರಂಭಗಳು, ಕಲ್ಯಾಣ ಮಂಟಪಗಳು, ಕನ್ವೆನ್ಷನ್ ಸೆಂಟರ್ಗಳು ಮತ್ತು ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆಯುವ ಸ್ಥಳಗಳಿಗೆ ಮಾರ್ಷಲ್ಗಳು ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಲಿದ್ದಾರೆ.
ಪ್ಲಾಸ್ಟಿಕ್ ಮತ್ತು ಥರ್ಮಕೋಲ್ ತಟ್ಟೆಗಳು, ಲೋಟಗಳು, ಚಮಚಗಳು, ಫ್ಲೆಕ್ಸ್ಗಳು ಹಾಗೂ ಪ್ಲಾಸ್ಟಿಕ್ ಶೀಟ್ಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಪರ್ಯಾಯ ವ್ಯವಸ್ಥೆ: ಪ್ಲಾಸ್ಟಿಕ್ ಬದಲಿಗೆ ಬಾಳೆ ಎಲೆ, ಅಡಿಕೆ ತಟ್ಟೆ ಹಾಗೂ ಸ್ಟೀಲ್ ಲೋಟಗಳನ್ನು ಬಳಸುವ ಮೂಲಕ ಸಾರ್ವಜನಿಕರು ಸಹಕರಿಸಬೇಕು ಮತ್ತು ಬೆಂಗಳೂರನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಕೈಜೋಡಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಸ್ವಚ್ಛ ಬೆಂಗಳೂರು ಅಭಿಯಾನದ ಅಡಿಯಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಕಠಿಣ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.








