ಬೆಂಗಳೂರು: ಹೊಸ ತಲೆಮಾರಿನ ಪ್ರಯಾಣಿಕರ ಬದಲಾಗುತ್ತಿರುವ ನಿರೀಕ್ಷೆಗಳಿಗೆ ಅನುಗುಣವಾಗಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಗೇಟ್ ಝೀ (Gate Z) ಎಂಬ ಲೌಂಜ್‌ನ್ನು ಪ್ರಾರಂಭಿಸಿದೆ. ಇದು ಜೆನ್ ಝೀ ಪೀಳಿಗೆಯಿಂದ ಪ್ರೇರಿತವಾದ, ದೇಶದ ಮೊದಲ ಸಾಮಾಜಿಕ ಲೌಂಜ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರಯಾಣದ ಶೈಲಿಗಳು ಬದಲಾಗುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಕಳೆಯುವ ಸಮಯವೂ ಪ್ರಸ್ತುತ ಪ್ರಯಾಣದ ಒಂದು ಭಾಗವಾಗಿ ಮಾರ್ಪಟ್ಟಿದೆ. ಪ್ರಯಾಣಿಕರು ತಮ್ಮ ಜೀವನಶೈಲಿಗೆ ಹತ್ತಿರವಿರುವ, ಸಾಮಾಜಿಕವಾಗಿ ಬೆರೆಯಲು ಪೂರಕವಾದ ಮತ್ತು ಆಪ್ತವೆನಿಸುವ ವಾತಾವರಣವನ್ನು ಬಯಸುತ್ತಿದ್ದಾರೆ. ಈ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ‘ಗೇಟ್ ಝೀ’ ಲೌಂಜ್‌ನ್ನು ವಿನ್ಯಾಸಗೊಳಿಸಲಾಗಿದೆ. ಇದು ಸಾಂಪ್ರದಾಯಿಕ ಲೌಂಜ್ ಮಾದರಿಯನ್ನು ಮೀರಿ; ಆರಾಮದಾಯಕವಾದ, ಸಂಸ್ಕೃತಿ ಮತ್ತು ಸಮುದಾಯವನ್ನು ಬೆಸೆಯುವ ಸಮಾನ ಸ್ಥಳವನ್ನು ಕಲ್ಪಿಸಿಕೊಡುತ್ತದೆ.
ಗೇಟ್ ಝೀ ಪೀಳಿಗೆಯನ್ನು ಕೇವಲ ವಯಸ್ಸಿನಿಂದ ಮಾತ್ರವಲ್ಲದೇ ಮನಸ್ಥಿತಿಯಿಂದಲೂ ವ್ಯಾಖ್ಯಾನಿಸಲಾಗುತ್ತದೆ. ಇದು ದೃಢತೆ, ಸುಲಭ ಲಭ್ಯತೆ, ಸುಸ್ಥಿರತೆ ಮತ್ತು ತಂತ್ರಜ್ಞಾನದ ಬಳಕೆಯನ್ನು ಪ್ರತಿನಿಧಿಸುತ್ತದೆ. ಟರ್ಮಿನಲ್ 2 ರಲ್ಲಿ 080 ಅಂತಾರಾಷ್ಟ್ರೀಯ ಲೌಂಜ್ ಪಕ್ಕದಲ್ಲಿ ಪ್ರಾರಂಭವಾಗಿರುವ ಗೇಟ್ ಝೀ ಲೌಂಜ್, ಪ್ರಯಾಣವನ್ನೇ ತಮ್ಮ ಜೀವನಶೈಲಿಯ ಭಾಗವಾಗಿಸಿಕೊಂಡಿರುವ ಪ್ರಯಾಣಿಕರ ಬದಲಾಗುತ್ತಿರುವ ಮನಸ್ಥಿತಿಯಿಂದ ಪ್ರೇರಿತವಾಗಿದೆ. ಗೇಟ್ ಝೀ ಲೌಂಜ್ ಆಧುನಿಕ ಮಾರುಕಟ್ಟೆ ಬೀದಿಯೊಂದರ ಚೈತನ್ಯದಿಂದ ಸ್ಫೂರ್ತಿ ಪಡೆದಿದೆ. ಪ್ರಯಾಣಿಕರು ಸುಲಭವಾಗಿ ಸಂಚರಿಸಲು ಪೂರಕವಾದ ದಾರಿಗಳು, ಸಾಮಾಜಿಕವಾಗಿ ಬೆರೆಯಲು ಪ್ರತ್ಯೇಕ ವಲಯಗಳು ಮತ್ತು ವಿಶ್ರಾಂತಿಯ ನಡುವೆ ಸಮತೋಲನ ಕಾಯ್ದುಕೊಳ್ಳುವ ವಿನ್ಯಾಸವನ್ನು ಹೊಂದಿದೆ.
ಇಲ್ಲಿನ ಬಾಗಿದ ಆಸನ ವ್ಯವಸ್ಥೆ, ಹಿತವಾದ ಬೆಳಕು ಮತ್ತು ಸಂವಾದಾತ್ಮಕ ವಲಯಗಳು ಕೆಲಸ ಮಾಡಲು, ದಣಿವಾರಿಸಿಕೊಳ್ಳಲು, ಇತರರೊಂದಿಗೆ ಬೆರೆಯಲು ಅಥವಾ ಏಕಾಂತವಾಗಿರಲು ಅನುವು ಮಾಡಿಕೊಡುತ್ತವೆ. ವಿನ್ಯಾಸ, ಆಹಾರ ಮತ್ತು ಕಲಾತ್ಮಕತೆಯ ಜಾಗತಿಕ ಶೈಲಿಯು ಸ್ಥಳೀಯ ಸೊಗಡಿನೊಂದಿಗೆ ಮಿಳಿತಗೊಂಡಿದೆ. ಸಯಾನ್ ಮತ್ತು ಆರೆಂಜ್ ಬಣ್ಣಗಳ ಸಂಯೋಜನೆ, ಬೀದಿ ದೀಪಗಳಿಂದ ಪ್ರೇರಿತವಾದ ಬೆಳಕು ಮತ್ತು ಪರಿಸರ ಸ್ನೇಹಿ ವಸ್ತುಗಳ ಬಳಕೆ ಇಲ್ಲಿನ ವಾತಾವರಣಕ್ಕೆ ಸಮಕಾಲೀನ ಕಳೆ ನೀಡುತ್ತವೆ. ಹೆಚ್ಚುವರಿಯಾಗಿ, ಪ್ರಯಾಣಿಕರಿಗೆ ದಾರಿ ತಿಳಿಯಲು, ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ಮತ್ತು ಪ್ರಯಾಣದ ಅನುಕೂಲವನ್ನು ಹೆಚ್ಚಿಸಲು ಎಐ ತಂತ್ರಜ್ಞಾನವನ್ನು ಇಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಲಾಗಿದೆ.
ಎಲ್ಲರನ್ನೂ ಒಳಗೊಂಡ, ನೈಜ ಮತ್ತು ಸ್ವಯಂ ಅಭಿವ್ಯಕ್ತಿಯಂತಹ ಜೆನ್ ಝೀ ತಲೆಮಾರಿನ ಮೌಲ್ಯಗಳು ಗೇಟ್ ಝೀ ಲೌಂಜ್‌ನ ವಿನ್ಯಾಸದಲ್ಲಿ ಬೇರೂರಿದ್ದು, ಎಲ್ಲ ವಯೋಮಾನದ ಪ್ರಯಾಣಿಕರನ್ನು ಸೆಳೆಯುವಂತೆಯೂ ವಿನ್ಯಾಸಗೊಳಿಸಲಾಗಿದೆ. ಕೆಲಸದಲ್ಲಿ ಮತ್ತು ಸಾಮಾಜಿಕವಾಗಿ ಬೆರೆಯಲು ಉತ್ಸಾಹಭರಿತ ವಲಯಗಳನ್ನು ಬಯಸುವ ಯುವ ವೃತ್ತಿಪರರಿಂದ ಹಿಡಿದು, ಆರಾಮದಾಯಕ ಮತ್ತು ಪ್ರಶಾಂತ ವಾತಾವರಣವನ್ನು ಇಷ್ಟಪಡುವ ಅನುಭವಿ ಪ್ರಯಾಣಿಕರವರೆಗೆ, ಇದು ಪ್ರತಿಯೊಬ್ಬರ ವಿಭಿನ್ನ ಪ್ರಯಾಣದ ಶೈಲಿ ಮತ್ತು ಅಗತ್ಯಗಳಿಗೆ ತಕ್ಕಂತೆ ಹೊಂದಿಕೊಳ್ಳುವಂತಿದೆ.
ಸಾಮಾಜಿಕ ಸಂವಹನ ಮತ್ತು ಅನುಭವಕ್ಕೆ ಆದ್ಯತೆ ನೀಡುವಂತೆ ವಿನ್ಯಾಸಗೊಳಿಸಲಾದ ಈ ಲೌಂಜ್‌ನ ಪ್ರಮುಖ ಆಕರ್ಷಕ ಲಕ್ಷಣಗಳು ಇಲ್ಲಿವೆ:
• ಬಬಲ್ ಅಂಡ್ ಬ್ರೂ: ಪ್ರಯಾಣಕ್ಕೂ ಮುನ್ನ ನಿಮ್ಮ ಮನಸ್ಸಿಗೆ ಚೈತನ್ಯ ನೀಡುವ ವಿಶಿಷ್ಟ ಕೆಫೆ-ಬಾರ್.
• ದ ಸಿಪ್ಪಿಂಗ್ ಲೌಂಜ್: ವಿಶ್ರಾಂತಿ ಪಡೆಯಲು ಅಥವಾ ಹರಟೆ ಹೊಡೆಯಲು ಹೇಳಿಮಾಡಿಸಿದ ಆರಾಮದಾಯಕ ತಾಣ.
• ಸಬ್‌ವೇ ಡೈನರ್: ಇದು ರೆಟ್ರೋ ಶೈಲಿಯಿಂದ ಸ್ಫೂರ್ತಿ ಪಡೆದ ಉಪಹಾರ ಮಂದಿರವಾಗಿದ್ದು, ಲೈವ್ ಕೌಂಟರ್‌ಗಳು ಮತ್ತು ಉತ್ಸಾಹ ತುಂಬಬಲ್ಲ ವಿನ್ಯಾಸವಿದೆ.
• ದ ಅಂಫಿಜೋನ್: ವಿಡಿಯೋ ಪ್ರದರ್ಶನಗಳು, ಪಾಪ್-ಅಪ್ ಕಾರ್ಯಕ್ರಮಗಳು ಮತ್ತು ಅನಿರೀಕ್ಷಿತ ಸಮ್ಮಿಲನಗಳಿಗಾಗಿ ರೂಪಿಸಲಾದ ಆಧುನಿಕ ಆಂಫಿಥಿಯೇಟರ್.
‘ಗೇಟ್ ಝೀ’ ಎಂಬ ಹೆಸರೇ ಒಂದು ವಿಶೇಷತೆಯಾಗಿದ್ದು, ಹೆಸರನ್ನು ಸೂಚಿಸಲು ಆಹ್ವಾನಿಸಿಸುವ ಮೂಲಕ ಈ ಹೆಸರನ್ನು ಆಯ್ಕೆ ಮಾಡಲಾಗಿದೆ. ಭಾರತದ ಯುವ ಸೃಜನಶೀಲ ಮನಸ್ಸುಗಳು ತಮಗಾಗಿ ರೂಪಿಸಲಾದ ಈ ತಾಣಕ್ಕೆ ತಾವೇ ಹೆಸರಿಡಲಿ ಎಂಬುದು ಇದರ ಉದ್ದೇಶವಾಗಿತ್ತು. ಈ ಸ್ಪರ್ಧೆಯಲ್ಲಿ ದೇಶದಾದ್ಯಂತದ ವಿದ್ಯಾರ್ಥಿಗಳು, ವಿನ್ಯಾಸಕರು ಮತ್ತು ವೃತ್ತಿಪರರು ಭಾಗವಹಿಸಿದ್ದರು. ಇದು ‘ಗೇಟ್ ಝೀ’ ಪರಿಕಲ್ಪನೆಯಲ್ಲಿರುವ ‘ಎಲ್ಲರನ್ನೂ ಒಳಗೊಳ್ಳುವ’ ಮತ್ತು ‘ಒಟ್ಟಾಗಿ ಸೃಜಿಸುವ’ ಗುಣವನ್ನು ಪ್ರತಿಬಿಂಬಿಸುತ್ತದೆ.
ಗೇಟ್ ಝೀ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಏರ್‌ಪೋರ್ಟ್ ಸರ್ವೀಸಸ್ ಲಿಮಿಟೆಡ್‌ನ (ಬಿಎಎಸ್‌ಎಲ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾರ್ಜ್ ಬೆನೆಟ್ ಕುರುವಿಲ್ಲಾ , “ಪ್ರಯಾಣದ ಸಂದರ್ಭದಲ್ಲಿ ಆರಾಮದ ಅನುಭವನ್ನು ನೀಡುವ ಉದ್ದೇಶದಿಂದ ಝೆನ್ ಝೀ ಜೀವನಶೈಲಿಗೆ ಅನುಗುಣವಾಗಿ ಈ ಲೌಂಜ್ ನಿರ್ಮಾಣಗೊಂಡಿದೆ. ಎಲ್ಲರನ್ನೂ ಒಳಗೊಳ್ಳುವಿಕೆ, ನೈಜತೆ ಮತ್ತು ಪರಸ್ಪರ ಸಂಪರ್ಕದ ಮೌಲ್ಯಗಳಿಂದ ಪ್ರೇರಿತವಾಗಿರುವ ಈ ಲೌಂಜ್, ಸೌಕರ್ಯ, ಸಂಸ್ಕೃತಿ ಮತ್ತು ಸಮುದಾಯವನ್ನು ಒಂದುಗೂಡಿಸುತ್ತದೆ. ಇದು ಎಲ್ಲಾ ವಯೋಮಾನದವರಿಗೂ ಆಪ್ತವೆನಿಸುವ ಮತ್ತು ಆಹ್ವಾನಕ ವಾತಾವರಣವನ್ನು ಒದಗಿಸುತ್ತದೆ. ಭಾರತದ ಯುವಜನತೆಯನ್ನೇ ಈ ಲೌಂಜ್‌ಗೆ ಹೆಸರಿಡಲು ಆಹ್ವಾನಿಸುವ ಮೂಲಕ, ನಾವು ‘ಸಹ-ಸೃಜನಶೀಲತೆ’ (Co-creation) ಎಂಬ ತತ್ವವನ್ನು ವಿಸ್ತರಿಸಿದ್ದೇವೆ. ಈ ಮೂಲಕ ಗೇಟ್ ಝೀ ಯಾವ ಮನಸ್ಥಿತಿಯನ್ನು ಪ್ರತಿನಿಧಿಸುತ್ತದೆಯೋ, ಅದೇ ಮನಸ್ಥಿತಿಯ ಯುವಜನತೆಯಿಂದ ಇದು ರೂಪಿತವಾಗಿದೆ. ಯಾವಾಗಲೂ ಜನರಿಗೆ ಮೊದಲ ಆದ್ಯತೆ ನೀಡುವ ಮತ್ತು ಅವರ ಭಾವನೆಗಳನ್ನು ಪ್ರತಿಬಿಂಬಿಸುವ ತಾಣವಾಗಿ ಉಳಿಯಲಿದೆ.” ಎಂದು ತಿಳಿಸಿದರು.
ಗೇಟ್ ಝೀ ಲೌಂಜ್ ಟರ್ಮಿನಲ್ 2 ರ ವಿನ್ಯಾಸದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ವಿಶೇಷ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸುತ್ತದೆ. ವಾಸ್ತುಶಿಲ್ಪ, ಸಂಸ್ಕೃತಿ, ಸುಸ್ಥಿರತೆ ಮತ್ತು ಪ್ರಯಾಣಿಕರ ಸೌಕರ್ಯಗಳನ್ನು ಅದ್ಭುತವಾಗಿ ಸಮ್ಮಿಳಿತಗೊಳಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಸೇವೆ ಮತ್ತು ವಿನ್ಯಾಸವನ್ನು ನೀಡುತ್ತಲೇ, ಬೆಂಗಳೂರಿನ ವಿಶಿಷ್ಟ ಸೊಗಡನ್ನು ಉಳಿಸಿಕೊಳ್ಳುವ ಟರ್ಮಿನಲ್ 2ರ ವಿಶಾಲ ದೃಷ್ಟಿಕೋನಕ್ಕೆ ಈ ಪರಿಕಲ್ಪನೆಯು ಪೂರಕವಾಗಿದೆ.
ಈ ಹೊಸ ಲೌಂಜ್ ಮೂಲಕ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಪ್ರಯಾಣಿಕರ ಅನುಭವವನ್ನು ಮರುರೂಪಿಸುತ್ತಿದೆ. ಆಧುನಿಕ ಪ್ರಯಾಣಿಕರ ಬದಲಾಗುತ್ತಿರುವ ನಿರೀಕ್ಷೆಗಳಿಗೆ ಸ್ಪಂದಿಸುವ ಮೂಲಕ, ಎಲ್ಲರನ್ನೂ ಒಳಗೊಳ್ಳುವ ಮತ್ತು ‘ಜನರಿಗೇ ಮೊದಲ ಆದ್ಯತೆ’ ನೀಡುವ ವಿಮಾನ ನಿಲ್ದಾಣದ ಅನುಭವವನ್ನು ನೀಡಲು ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
BIG BREAKING: ನಾಳೆ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲು ಕರ್ನಾಟಕ ರಾಜ್ಯಪಾಲ ಗೆಹ್ಲೋಟ್ ನಿರಾಕರಣೆ
BREAKING: ರಾಜ್ಯದಲ್ಲಿ ವಾಹನಗಳ FC, ಸಾಗರೇತರ ನೋಂದಣಿ ನವೀಕರಣಕ್ಕೆ ಮಾರ್ಗಸೂಚಿ ಪ್ರಕಟ: ಈ ನಿಯಮ ಪಾಲನೆ ಕಡ್ಡಾಯ








