ಬೆಂಗಳೂರು : ಬೆಂಗಳೂರನ್ನು ಭಾರತದ ಮೊದಲ ಆರೋಗ್ಯ ನಗರವನ್ನಾಗಿ ಪರಿವರ್ತಿಸುವ ಆರೋಗ್ಯ ಸಿಟಿಯ ದೃಷ್ಟಿಕೋನವನ್ನು ಬೆಂಬಲಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ರೋಟರಿ, ಆರೋಗ್ಯ ವಲ್ಡ್ ಹಾಗೂ ಬಿ-ಪ್ಯಾಕ್ ಸಹಯೋಗದಲ್ಲಿ ಮಂಗಳವಾರ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆದ “ಆರೋಗ್ಯ ಸಿಟಿ ಸಮ್ಮಿಟ್-2024 ನನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ನಮ್ಮೆಲ್ಲರ ಮೊದಲ ಪ್ರಾಶಸ್ತ್ಯವಾಗಬೇಕು. ಆದರೆ, ಇಂದು ಒಬೆಸಿಟಿ, ಡಯಾಬಿಟಿಸ್, ಬಿಪಿ, ಒತ್ತಡ ಹೀಗೆ ಅನೇಕ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಎಷ್ಟೇ ಕೆಲಸವಿದ್ದರೂ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ದಿನದಲ್ಲಿ ಒಂದಿಷ್ಟು ಕಾಲ ತೆಗೆದಿಡುವ ಅವಶ್ಯಕತೆ ಇದೆ. ನಮ್ಮ ನಗರವನ್ನು ಆರೋಗ್ಯ ಸಿಟಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಪ್ರತಿಜ್ಞೆಯ ಆಂದೋಲನ ಪ್ರಶಂಸನೀಯ, ಇದಕ್ಕೆ ನಮ್ಮ ಸರ್ಕಾರದ ಸಂಪೂರ್ಣ ಬೆಂಬಲವಿದೆ. ಸರ್ಕಾರದಿಂದಲೂ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. ಕೇವಲ ಸರ್ಕಾರದಿಂದ ಇಂಥ ಕೆಲಸಗಳು ಸಾಧ್ಯವಿಲ್ಲ, ನಮ್ಮೊಂದಿಗೆ ಎನ್‌ಜಿಒಗಳು ಕೈ ಜೋಡಿಸಿದಾಗ ಮಾತ್ರ ಎಲ್ಲೆಡೆ ಉತ್ತಮ ಆರೋಗ್ಯ ನಿರ್ಮಾಣ ಸಾಧ್ಯ ಎಂದು ಹೇಳಿದರು.
ರಾಣಿ ಪ್ರಮೋದಾ ದೇವಿ ಒಡೆಯರ್ ಮಾತನಾಡಿ, “ಸಂಘಟನೆಗಳಿಂದ ಇಂತಹ ಆಂದೋಲನ ನಡೆಯುವುದರ ಜೊತೆಗೆ ಆರೋಗ್ಯಕರ ಜೀವನ ನಡೆಸುವ ಬದ್ಧತೆ ಹಾಗೂ ಆಸಕ್ತಿ ಪ್ರತಿಯೊಬ್ಬ ನಾಗರಿಕರಿಗೂ ಬರಬೇಕು, ಆಗಷ್ಟೇ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ನಾವೆಲ್ಲರೂ ವೈಯಕ್ತಿಕವಾಗಿ ಆರೋಗ್ಯದ ಕಡೆಗೆ ಗಮನಹರಿಸಿದರೆ, ಯಾವುದೇ ಆರೋಗ್ಯ ಸಮಸ್ಯೆ ನಮ್ಮನ್ನು ಕಾಡುವುದಿಲ್ಲ. ನಾವು ಸೇವಿಸುವ ಆಹಾರದ ಮೇಲೆ ಹೆಚ್ಚು ನಿಯಂತ್ರಣವಿರಬೇಕು, ಪ್ರತಿಯೊಬ್ಬರು ತಮ್ಮ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಪ್ರಾರಂಭಿಸಿದರೆ ಆರೋಗ್ಯಕರ ಕುಟುಂಬ, ಆರೋಗ್ಯಕರ ಬೆಂಗಳೂರು ನಿರ್ಮಾಣ ಸಾಧ್ಯ ಎಂದರು.
ಮಣಿಪಾಲ್ ಆಸ್ಪತ್ರೆ ಅಧ್ಯಕ್ಷರಾದ ಡಾ. ಸುದರ್ಶನ್ ಬಲ್ಲಾಳ್ ಮಾತನಾಡಿ, ಯಾವುದೇ ಕಾಯಿಲೆಗೆ ಚಿಕಿತ್ಸೆ ಪಡೆಯುವುದಕ್ಕಿಂತ ಅದು ಬರುವುದಕ್ಕು ಮೊದಲೇ ತಡೆಯುವುದು ಒಳ್ಳೆಯದು. ಪ್ರತಿಯೊಬ್ಬರು ಆರೋಗ್ಯಕರ ಜೀವನಕ್ಕೆ ಒತ್ತು ನೀಡಿ. ಅನೇಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಪ್ರತಿಜ್ಞೆ ಮಾಡುವ ಮೂಲಕ ತಮ್ಮ ಜವಾಬ್ದಾರಿ ಮತ್ತು ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.ಈ ಪ್ರಮಾಣ ಇನ್ನಷ್ಟು ಹೆಚ್ಚಬೇಕು, ಪ್ರತಿಯೊಬ್ಬರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಪ್ರತಿಜ್ಞೆ ಮಾಡಿದರಷ್ಟೇ ಆರೋಗ್ಯ ನಗರ ನಿರ್ಮಾಣ ಸಾಧ್ಯ ಎಂದರು.
ಆರೋಗ್ಯ ವರ್ಲ್ಡ್‌ನ ಸಂಸ್ಥಾಪಕಿ ಡಾ. ನಳಿನಿ ಸಾಲಿಗ್ರಾಮ್ ಮಾತನಾಡಿ, ಎರಡು ವರ್ಷಗಳ ಹಿಂದೆ ಪ್ರಾರಂಭಿಸಿದ ಈ ಪ್ರತಿಜ್ಞಾ ಆಂದೋಲನ ೧ ಮಿಲಿಯನ್ ಜನರನ್ನು ತಲುಪಿದೆ.ಮುಂದಿನ ಎರಡು ವರ್ಷದಲ್ಲಿ ಈ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಗುರಿ ನಮ್ಮದು. ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಪ್ರತಿಜ್ಞೆ ಸ್ವೀಕರಿಸಬೇಕು ಎಂದು ಹೇಳಿದರು.
ಬೆಂಗಳೂರನ್ನು ದೇಶದ ಮೊದಲ ಆರೋಗ್ಯ ಸಿಟಿಯ ಉದ್ದೇಶ
ಬೆಂಗಳೂರನ್ನು ದೇಶದ ಮೊದಲ “ಆರೋಗ್ಯ ಸಿಟಿ”ಯನ್ನಾಗಿ ಮಾಡುವ ಉದ್ದೇಶದಿಂದ 2022 ರಲ್ಲಿ ಪ್ರತಿಜ್ಞಾ ಆಂದೋಲನ ಪ್ರಾರಂಭಿಸಲಾಯಿತು. ಕಳೆದ ಎರಡು ವರ್ಷದಲ್ಲಿ1 ಮಿಲಿಯನ್ ಜನರು ಈ ಪ್ರತಿಜ್ಞೆಯ ಚಾಲೆಂಜ್ ತೆಗೆದುಕೊಂಡಿದ್ದಾರೆ. ಪ್ರಮುಖವಾಗಿ ೨೨ ಸಂಸ್ಥೆಗಳು ಇದರಲ್ಲಿ ಕೈ ಜೋಡಿಸಿವೆ. ಈ ಎಲ್ಲರಿಗೂ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಕುರಿತಾದ ಶಿಕ್ಷಣ ನೀಡುವ ಕೈಪಿಡಿ ನೀಡಲಾಯಿತು. ಇದೇವೇಳೆ ನಗರದಲ್ಲಿ ಆರೋಗ್ಯಕರ ಜೀವನಶೈಲಿ ಮತ್ತು ರೋಗ ತಡೆಗಟ್ಟುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರತಿಜ್ಞೆ ಮಾಡಿದವರ ಪ್ರಕ್ರಿಯೆ ಮತ್ತು ಸಾಧನೆಗಳ ವರದಿಯನ್ನು ( https://arogyacity.in/wp-content/uploads/2024/12/Arogya-City-Report.pdf ) ಬಿಡುಗಡೆ ಮಾಡಲಾಯಿತು.
ಸರ್ಕಾರಿ ಘಟಕಗಳು, ಕಾರ್ಪೋರೇಟ್ ಸಂಸ್ಥೆಗಳ ಕೈಜೋಡಣೆ
ಈ ಪ್ರತಿಜ್ಞಾ ಆಂದೋಲನಕ್ಕೆ ಸರ್ಕಾರಿ ಘಟಕಗಳು, ಕಾರ್ಪೋರೇಟ್ ಕಂಪನಿಗಳು, ಎನ್‌ಜಿಒ, ವಾಣಿಜೋದ್ಯಮ, ಶಿಕ್ಷಣ ಸಂಸ್ಥೆಗಳು ಸೇರಿದಂತೆ 30ಕ್ಕೂ ಹೆಚ್ಚು ಸಂಸ್ಥೆಗಳು ಆರೋಗ್ಯ ಕಾಪಾಡಿಕೊಳ್ಳುವಿಕೆ ಪ್ರತಿಜ್ಞೆಯನ್ನು ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಇತರೆ ನಗರಗಳಿಗೂ ಈ ಉಪಕ್ರಮವನ್ನು ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ.
ಶೇ. 65ರಷ್ಟು ಜನರ ದೈಹಿಕ ಚಟುವಟಿಕೆ ಮಾಡುವುದೇ ಇಲ್ಲ
2021 ರ ವರ್ಲ್ಡ್ ಎಕನಾಮಿಕ್ ಫೋರಮ್ (WEF) ಪ್ರಕಾರ ಶೇ. 43ರಷ್ಟು ಬೆಂಗಳೂರಿಗರು ಸ್ಥೂಲಕಾಯತೆಯಿಂದ ಬಳಲುತ್ತಿದ್ದರೆ, ಶೇ. 65ರಷ್ಟು ಜನ ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದಿಲ್ಲ ಎಂಬುದು ತಿಳಿದುಬಂದಿದೆ. ಈ ಪ್ರಮಾಣವನ್ನು ಆರೋಗ್ಯಕರ ಜೀವನ ನಡೆಸುವವರ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಈ ಆಂದೋಲನ ಸಾಗಲಿದೆ. ಆಸಕ್ತರು https://arogyacity.in/pledgemakers-2024-26/# ಈ ವೆಬ್‌ಸೈಟ್‌ಗೆ ತೆರಳಿ ತಮ್ಮ ಆರೋಗ್ಯದ ಪ್ರತಿಜ್ಞೆಯನ್ನು ಸ್ವೀಕರಿಸಬಹುದು.
BREAKING: ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಗೆ ಬಿಗ್ ರಿಲೀಫ್: ಚುನಾವಣಾ ಬಾಂಡ್ ಕೇಸ್ ರದ್ದುಪಡಿಸಿ ಹೈಕೋರ್ಟ್ ಆದೇಶ