ಬೀದರ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಎರಡು ದಿನಗಳ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಬಸವಾದಿ ಶರಣರ ಕರ್ಮಭೂಮಿ, ಸೂಫಿ-ಸಂತರ ನಾಡು ಬೀದರ್ ಅಣಿಯಾಗಿದೆ.
ಸಮ್ಮೇಳನ ಸ್ಥಳವಾದ ನಗರದ ಝೀರಾ ಕನ್ವೆನ್ಶನ್ ಹಾಲ್ನಲ್ಲಿ ಪ್ರಧಾನ ವೇದಿಕೆ, ನೋಂದಣಿ, ಪ್ರದರ್ಶನ ಮಳಿಗೆಗಳು, ಪತ್ರಕರ್ತರಿಗೆ ಊಟ, ಕುಡಿಯುವ ನೀರು ಸೇರಿದಂತೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.
ಹಿರಿಯರು ಹಾಗೂ ಮಾಜಿ ಜಿಲ್ಲಾ ಅಧ್ಯಕ್ಷರ ಸಲಹಾ ಸಮಿತಿ, ಸಮ್ಮೇಳನ ಪೋಷಕರು, ವಸತಿ, ಆಹಾರ, ಸಾರಿಗೆ, ಪ್ರಚಾರ, ಮೆರವಣಿಗೆ, ಪ್ರತಿನಿಧಿಗಳ ನೋಂದಣಿ- ಕಿಟ್ ವಿತರಣೆ, ಛಾಯಾಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ-ಮಾರಾಟ ಮಳಿಗೆ, ಸಾಂಸ್ಕøತಿಕ, ಮಹಿಳಾ, ಆರೋಗ್ಯ, ಅತಿಥಿ ಸತ್ಕಾರ, ಸ್ಮರಣ ಸಂಚಿಕೆ ಮುದ್ರಣ, ಪ್ರವಾಸ ಹಾಗೂ ಶಿಸ್ತು ಪಾಲನೆ ಮತ್ತು ಸ್ವಯಂ ಸೇವಕರ ಸಮಿತಿಗಳು ಅರ್ಥಪೂರ್ಣ ಸಮ್ಮೇಳನಕ್ಕೆ ಅಗತ್ಯ ತಯಾರಿ ಮಾಡಿಕೊಂಡಿವೆ.
ಸಮ್ಮೇಳನ ನಿಮಿತ್ತ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಎಲ್ಲೆಡೆ ಸಮ್ಮೇಳಕ್ಕೆ ಸ್ವಾಗತ ಕೋರುವ ಕಟೌಟ್, ಬ್ಯಾನರ್ಗಳು ರಾರಾಜಿಸುತ್ತಿವೆ. ಪತ್ರಕರ್ತರಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ.
ಸಮ್ಮೇಳನಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳ ಪತ್ರಕರ್ತರು
ಪತ್ರಕರ್ತರ ಮಹಾ ಸಂಗಮವಾಗಲಿರುವ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಪತ್ರಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.
ಬಹುತೇಕ ಪತ್ರಕರ್ತರು ಎರಡು ದಿನ ನಡೆಯಲಿರುವ ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅನೇಕರು ಒಂದು ದಿನ ಬಂದು ಹೋಗಲಿದ್ದಾರೆ. ಒಟ್ಟಾರೆ ಐದು ಸಾವಿರಕ್ಕೂ ಹೆಚ್ಚು ಪತ್ರಕರ್ತರು ಸಮ್ಮೇಳನದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಸಮ್ಮೇಳನಕ್ಕೆ ಆಗಮಿಸುವ ಪತ್ರಕರ್ತರಿಗೆ ವಸತಿ, ಸಾರಿಗೆ, ಆಹಾರ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಮ್ಮೇಳನ ಅಂಗವಾಗಿ ನಾಲ್ಕು ಗೋಷ್ಠಿಗಳು ನಡೆಯಲಿವೆ ಎಂದು ತಿಳಿಸಿದರು.
ನಾಳೆಯ ಏಪ್ರಿಲ್ 11 ರಂದು ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಇದಕ್ಕೂ ಮುನ್ನ ಬೆಳಿಗ್ಗೆ 9ಕ್ಕೆ ಬಸವೇಶ್ವರ ವೃತ್ತದಿಂದ ಸಮ್ಮೇಳನ ಸ್ಥಳ ಝೀರಾ ಕನ್ವೆನ್ಶನ್ ಹಾಲ್ವರೆಗೆ ಭವ್ಯ ಮೆರವಣಿಗೆ ಜರುಗಲಿದೆ. 40ನೇ ಸಮ್ಮೇಳನದ ಸವಿನೆನಪಿಗಾಗಿ ಮೆರವಣಿಗೆಯಲ್ಲಿ 40 ಬೃಹತ್ ಕೊಡೆಗಳು ಇರಲಿವೆ. ವಿವಿಧ ಕಲಾ ತಂಡಗಳು ಮೆರವಣಿಗೆಯ ವೈಭವ ಹೆಚ್ಚಿಸಲಿವೆ ಎಂದು ಹೇಳಿದರು.
ಮಾದರಿ ಸಮ್ಮೇಳನಕ್ಕೆ ಸರ್ವ ಪ್ರಯತ್ನ
ಬೀದರ್: ಬೀದರ್ನಲ್ಲಿ ನಡೆಯುವ ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ಮಾದರಿ ಆಗಿಸುವ ದಿಸೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರು ಸಂಘವು ಜಿಲ್ಲೆಯ ಎಲ್ಲ ಪತ್ರಕರ್ತರ ಜತಗೂಡಿ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ದೇವಪ್ಪ ತಿಳಿಸಿದರು.
ರಾಜ್ಯದ ವಿವಿಧೆಡೆಯಿಂದ ಬರುವ ಪತ್ರಕರ್ತರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ನೋಂದಣಿ ಸೇರಿ 22 ಮಳಿಗೆಗಳು ಇರಲಿವೆ ಎಂದು ಹೇಳಿದರು.
ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟನೆ
ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ನಗರದ ಝೀರಾ ಕನ್ವೆನ್ಶನ್ ಹಾಲ್ನ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ವೇದಿಕೆಯಲ್ಲಿ ಶನಿವಾರ ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಛಾಯಾಚಿತ್ರ ಪ್ರದರ್ಶನ, ಸಂಸದ ಸಾಗರ್ ಖಂಡ್ರೆ ವ್ಯಂಗ್ಯ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.
ಹಾರಕೂಡದ ಚನ್ನವೀರ ಶಿವಾಚಾರ್ಯರು ಹಾಗೂ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ, ಮಾಜಿ ಸಚಿವ ರಾಜಶೇಖರ ಪಾಟೀಲ ಘನ ಉಪಸ್ಥಿತಿ ವಹಿಸಲಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ದೇವಪ್ಪ ಮೊದಲ ಮಾತು ಆಡಲಿದ್ದಾರೆ. ಪತ್ರಕರ್ತ ವಿಶ್ವೇಶ್ವರ ಭಟ್ ಪ್ರಧಾನ ಭಾಷಣ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಶಾಸಕ ಶರಣು ಸಲಗರ, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಶಾಸಕ ಅಶೋಕ ಖೇಣಿ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ ಡಾ. ಬಲಬೀರಸಿಂಗ್, ಮುಖಂಡ ಗುರುನಾಥ ಕೊಳ್ಳೂರ ವಿಶೇಷ ಆಹ್ವಾನಿತರಾಗಿರುವರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಜಿಲ್ಲಾ ಅಡಾಕ್ ಕಮಿಟಿ ಸದಸ್ಯರಾದ ಅಪ್ಪರಾವ್ ಸೌದಿ ಹಾಗೂ ಶಿವಕುಮಾರ ಸ್ವಾಮಿ ಉಪಸ್ಥಿತರಿರುವರು.
ಮಧ್ಯಾಹ್ನ 2ಕ್ಕೆ ಗಾಂಧಿ-ಅಂಬೇಡ್ಕರ್ ಹಾಗೂ ಪತ್ರಿಕೋದ್ಯಮ ಗೋಷ್ಠಿ, ಮಧ್ಯಾಹ್ನ 3.30ಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮತ್ತು ಮಾಧ್ಯಮ ಗೋಷ್ಠಿ, ಸಂಜೆ 5ಕ್ಕೆ ಗಡಿ ಸಮಸ್ಯೆಗಳು ಸಂವಾದ, ಸಂಜೆ 5.30ಕ್ಕೆ ಮಾಧ್ಯಮ ಮತ್ತು ಉದ್ಯಮ ಉಪನ್ಯಾಸ ನಡೆಯಲಿದೆ.








