ಬೆಂಗಳೂರು: ಅರಣ್ಯ ಅಧಿಕಾರಿಗಳು ತಿಂಗಳಿಗೊಮ್ಮೆ ಕಾಡಿನಂಚಿನ ಗ್ರಾಮಗಳಿಗೆ ಭೇಟಿ ನೀಡಿ ಜನಸಂಪರ್ಕ ಸಭೆ ನಡೆಸುವ ಮೂಲಕ ಕುಂದು ಕೊರತೆ ಆಲಿಸಿ ಪರಿಹಾರ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿಂದು ನಡೆದ ರಾಜ್ಯ ವನ್ಯಜೀವಿ ಮಂಡಳಿಯ 3ನೇ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಉಪ ವಲಯ ಅರಣ್ಯಾಧಿಕಾರಿ, ಎ.ಸಿ.ಎಫ್. ಆರ್.ಎಫ್.ಓ. ಮತ್ತು ಸಿಬ್ಬಂದಿ ಜೀವಹಾನಿ, ಬೆಳೆ ಹಾನಿಯಿಂದ ನೊಂದ ಜನರ ಗ್ರಾಮಗಳಿಗೆ ತೆರಳಿ ಪರಿಸ್ಥಿತಿಯ ಖುದ್ದು ಅವಲೋಕನ ಮಾಡಿ, ಸಮಸ್ಯೆ ಆಲಿಸಿ, ಪರಿಹರಿಸಿ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳು ಸಾವಿಗೀಡಾದ ಹಾಗೂ ಅಕ್ರಮ ವಿದ್ಯುತ್ ಸಂಪರ್ಕಿತ ಬೇಲಿಗಳ ಸ್ಪರ್ಶದಿಂದ ಕಾಡಾನೆಗಳು ಮೃತಪಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಹಿರಿಯ ಅಧಿಕಾರಿಗಳು ಕಾಡಿನ ಪ್ರತಿ ವಲಯಕ್ಕೆ ತೆರಳಿ, ವಲಯ ಅಧಿಕಾರಿಗಳ, ಗಸ್ತು ಸಿಬ್ಬಂದಿಯ ಕಾರ್ಯವೈಖರಿಯ ಪರಾಮರ್ಶೆ ಮಾಡಿ, ಮುಂಚೂಣಿ ಸಿಬ್ಬಂದಿಯನ್ನು ಹುರಿದುಂಬಿಸಿದರೆ ಇಂತಹ ಘಟನೆಗಳನ್ನು ತಡೆಯಬಹುದು ಎಂದು ಅಭಿಪ್ರಾಯಪಟ್ಟರು.
ವನ್ಯ ಜೀವಿ ಮಂಡಳಿಯ ಸಭೆಯಲ್ಲಿ ಹೊಸಪೇಟೆಯಿಂದ ಕ್ಯಾಸಲ್ ರಾಕ್ ವರೆಗೆ ಇರುವ ರೈಲು ಮಾರ್ಗವನ್ನು ಜೋಡಿ ಮಾರ್ಗವಾಗಿ ಪರಿವರ್ತಿಸುವ ಪ್ರಸ್ತಾವನೆ ಕುರಿತಂತೆ ಪರಾಮರ್ಶಿಸಿದ ಅವರು ಯೋಜನೆಯಿಂದ ಜೀವವೈವಿಧ್ಯ, ಪರಿಸರ ಮತ್ತು ವನ್ಯಜೀವಿಗಳ ಮೇಲಾಗುವ ಪರಿಣಾಮಗಳನ್ನು ತಗ್ಗಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, ಮುಂದಿನ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಲು ಸೂಚಿಸಿದರು.
ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್. ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುಮತಿ ನೀಡುವ ಕುರಿತಂತೆ ಸಭೆಯಲ್ಲಿ ಪರಾಮರ್ಶಿಸಲಾಯಿತು.
ಚಾಲಕ ಆತ್ಮಹತ್ಯೆ ಪ್ರಕರಣ: ಸಂಸದ ಸುಧಾಕರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು
AI ಚಾಟ್‌ಬಾಟ್ chatGPT ಹದಿಹರೆಯದವರಿಗೆ ಮಾದಕ ದ್ರವ್ಯ, ಆತ್ಮಹತ್ಯೆ ಸಲಹೆಗಳನ್ನು ಹಂಚಿಕೆ: ಅಧ್ಯಯನ