ಸಾಮಾನ್ಯವಾಗಿ ಪ್ರೇಮಿಗಳು ಭೇಟಿಯಾಗಲು ಸುಂದರ ಪಾರ್ಕ್‌ಗಳು, ಸಿನಿಮಾ ಮಂದಿರ ಅಥವಾ ಕಾಫಿ ಶಾಪ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇಂದಿನ ‘ಜೆನ್ ಝಿ’ (Gen Z) ಯುವಜನತೆ ಇದಕ್ಕಿಂತ ಸಂಪೂರ್ಣ ಭಿನ್ನವಾದ, ವಿಚಿತ್ರವಾದ ದಾರಿಯನ್ನು ತುಳಿಯುತ್ತಿದ್ದಾರೆ. ಇದನ್ನು ‘ಸಿಮೆಟ್ರಿ ಡೇಟಿಂಗ್’ (Cemetery Dating) ಎಂದು ಕರೆಯಲಾಗುತ್ತಿದೆ.
ನಗರದ ಗದ್ದಲ, ಜನದಟ್ಟಣೆಯಿಂದ ಬೇಸತ್ತ ಯುವ ಜೋಡಿಗಳು ಈಗ ಸ್ಮಶಾನದಂತಹ ನಿಶ್ಯಬ್ದ ಪ್ರದೇಶಗಳನ್ನು ತಮ್ಮ ಭೇಟಿಯ ತಾಣವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲಿನ ಮೌನ ಮತ್ತು ಏಕಾಂತವು ತಮ್ಮ ಸಂಭಾಷಣೆಗೆ ಉತ್ತಮ ವಾತಾವರಣ ನೀಡುತ್ತದೆ ಎಂಬುದು ಇವರ ವಾದ.
ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ಯುವಕ-ಯುವತಿಯರು ಸ್ಮಶಾನದಲ್ಲಿ ಡೇಟಿಂಗ್ ಮಾಡುತ್ತಿರುವ ಫೋಟೋ ಮತ್ತು ವಿಡಿಯೋಗಳನ್ನು ‘ಈಸ್ಥೆಟಿಕ್’ (Aesthetic) ಎಂಬ ಹ್ಯಾಶ್‌ಟ್ಯಾಗ್‌ನಡಿ ಹಂಚಿಕೊಳ್ಳುತ್ತಿದ್ದಾರೆ. ಸ್ಮಶಾನದ ಕಲ್ಲಿನ ಕಂಬಗಳು ಮತ್ತು ಹಳೆಯ ಸಮಾಧಿಗಳ ಮಧ್ಯೆ ಕುಳಿತು ಇವರು ಸಮಯ ಕಳೆಯುತ್ತಿದ್ದಾರೆ.
ಸತ್ತವರ ಆತ್ಮಗಳು ಮತ್ತು ನಿಗೂಢತೆಯ ಬಗ್ಗೆ ಕುತೂಹಲ ಹೊಂದಿರುವ ಈ ಪೀಳಿಗೆ, ಇದನ್ನೊಂದು ಸಾಹಸಮಯ ಅಥವಾ ‘ಕೂಲ್’ ವಿಷಯ ಎಂದು ಭಾವಿಸುತ್ತಿದೆ. ಜೀವನದ ನಶ್ವರತೆಯನ್ನು ಅರ್ಥಮಾಡಿಕೊಳ್ಳಲು ಇದು ಸಹಕಾರಿ ಎಂಬ ವಿಲಕ್ಷಣ ತರ್ಕವನ್ನೂ ಕೆಲವರು ನೀಡುತ್ತಿದ್ದಾರೆ.
ಮನೋವಿಜ್ಞಾನಿಗಳ ಪ್ರಕಾರ, ಸಾವು ಮತ್ತು ಸ್ಮಶಾನದಂತಹ ನಕಾರಾತ್ಮಕ ಜಾಗಗಳನ್ನು ಪ್ರೇಮದ ಸಂಕೇತವಾಗಿ ಬಳಸುವುದು ಮಾನಸಿಕ ಅಸ್ವಸ್ಥತೆ ಅಥವಾ ತೀವ್ರವಾದ ಒಂಟಿತನದ ಸಂಕೇತವಾಗಿರಬಹುದು. ಸಮಾಜದ ಸಾಂಪ್ರದಾಯಿಕ ಚೌಕಟ್ಟುಗಳನ್ನು ಮುರಿಯುವ ಹಪಾಹಪಿಯಲ್ಲಿ ಯುವಜನತೆ ದಾರಿ ತಪ್ಪುತ್ತಿದ್ದಾರೆ ಎಂಬ ಆತಂಕ ವ್ಯಕ್ತವಾಗಿದೆ.








