ಬೆಂಗಳೂರು: ಆಗಸ್ಟ್.1ರಿಂದ ಜಾರಿಗೆ ಬರುವಂತೆ ಬೆಂಗಳೂರಲ್ಲಿ ಆಟೋ ಮೀಟರ್ ದರವನ್ನು ಪರಿಷ್ಕರಿಸಿ ಸಾರಿಗೆ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಮೂಲಕ ಬೆಂಗಳೂರಲ್ಲಿ ಪ್ರಯಾಣಿಕರಿಗೆ ಶಾಕ್ ನೀಡಲಾಗಿದೆ.
ಈ ಸಂಬಂಧ ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳು ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ. ಸರ್ಕಾರದ ಅಧಿಕೃತ ಆದೇಶದಲ್ಲಿ ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಆಟೋರಿಕ್ಷಾ ಮೀಟರ್ ದರ ಪರಿಷ್ಕರಣೆ ಕುರಿತು ಕೂಲಂಕುಶವಾಗಿ ಪರಿಶೀಲಿಸಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಟೋ ರಿಕ್ಷಾ ದರಗಳನ್ನು ಪರಿಷ್ಕರಿಸಿದೆ. ದಿನಾಂಕ 01-08-2025ರಿಂದ ನೂತನ ದರಗಳು ಜಾರಿಗೆ ಬರಲಿದೆ ಎಂದಿದೆ.
ಆಗಸ್ಟ್.1ರಿಂದ ಆಟೋ ಮೀಟರ್ ದರ ಎಷ್ಟು ಹೆಚ್ಚಳ ಗೊತ್ತಾ.?
ಆಗಸ್ಟ್.1, 2025ರಿಂದ ಜಾರಿಗೆ ಬರುವಂತೆ ಕನಿಷ್ಠ ದರ ಮೊದಲ 2 ಕಿಲೋಮೀಟರ್ ಗೆ ರೂ.36 ನಿಗದಿ ಪಡಿಸಲಾಗಿದೆ. ಅದು ಮೂರು ಜನ ಪ್ರಯಾಣಿಕರಿಗೆ. ಈ ನಂತ್ರ ಪ್ರತಿ ಕಿಲೋಮೀಟರ್ ಗೆ ರೂ.18ಗಳನ್ನು ಮೂರು ಜನ ಪ್ರಯಾಣಿಕರು ತೆರಳೋದಕ್ಕೆ ವಿಧಿಸಲಾಗಿದೆ.
ಕಾಯುವಿಕೆಗೆ ಸಂಬಂಧಿಸಿದಂತೆ ಮೊದಲ ಐದು ನಿಮಿಷಗಳ ಕಾಲ ಉಚಿತವಾಗಿರುತ್ತದೆ. ಐದು ನಿಮಿಷದ ನಂತ್ರ, ಪ್ರತಿ ಹದಿನೈದು ನಿಮಿಷ ಅಥವಾ ಅದರ ಭಾಗಕ್ಕೆ ರೂ.10 ದರ ನಿಗದಿ ಪಡಿಸಲಾಗಿದೆ.
ಇನ್ನೂ ಪ್ರಯಾಣಿಕರ ಲಗೇಜಿಗೆ ಮೊದಲ 20 ಕೆಜಿಗೆ ಉಚಿತವಾಗಿದೆ. 20 ಕೆಜಿಯಿಂದ ಮೇಲ್ಪಟ್ಟ ಲಗೇಜಿಗೆ 10 ರೂಪಾಯಿ ನಿಗದಿ ಪಡಿಸಲಾಗಿದೆ. ಗರಿಷ್ಠ ಪ್ರಯಾಣಿಕರ ಲಗೇಜು 50 ಕೆ.ಜಿ ಮೀರದಂತೆ ನಿಗದಿ ಪಡಿಸಲಾಗಿದೆ.
ರಾತ್ರಿ ವೇಳೆ ಸಾಮಾನ್ಯ ದರ ಹಾಗೂ ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು ದರ ನಿಗದಿ ಪಡಿಸಲಾಗಿದೆ. ಅಂದರೆ ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ಈ ದರ ಅನ್ವಯಿಸಲಿದೆ.