ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದಲ್ಲಿ ಆಗಸ್ಟ್.8ರಿಂದ ಮೂರು ದಿನಗಳ ಕಾಲ ಹಲಸು ಮತ್ತು ಹಲಸಿನ ಉತ್ಪನ್ನಗಳ ಮೇಳವನ್ನು ಬ್ರಾಸಂ ಸಭಾಭವನದಲ್ಲಿ ಆಯೋಜಿಸಿರುವುದಾಗಿ ಆಯೋಜಕರಾದಂತ ಗಣೇಶ್ ಶೆಟ್ಟಿ ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ರೋಟರಿ ಕ್ಲಬ್, ಇನ್ನರ್ ವೀಲ್ ಸಾಗರ ಯೂನಿಕ್ ಮತ್ತು ರೈತ ಉತ್ಪಾದಕರ ಸೌಹಾರ್ದ ಸಹಕಾರ ಸಂಘದ ಆಶ್ರಯದಲ್ಲಿ ಈ ಹಲಸು ಮತ್ತು ಹಣ್ಣು ಮೇಳ ಹಮ್ಮಿಕೊಳ್ಳಲಾಗಿದೆ. ಆಗಸ್ಟ್.8ರಂದು ಬೆಳಗ್ಗೆಯಿಂದಲೇ ಹಲಸು ಮತ್ತು ಹಲಸಿನ ಉತ್ಪನ್ನಗಳ ಮೇಳ ಆರಂಭಗೊಳ್ಳಲಿದೆ. ಸಂಜೆ ಶಾಸಕ ಗೋಪಾಲಕೃಷ್ಣ ಬೇಳೂರು ಮೇಳವನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ಹಿಂಡ್ಲುಮನೆ ರಾಜೇಂದ್ರ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ಸಾಗರದ ಬ್ರಾಸಂ ಸಭಾಭವನದ ನೆಲಮಹಡಿಯಲ್ಲಿ ಹಲಸಿನ ಖಾದ್ಯ, ಬಗೆ ಬಗೆಯ ಹಲಸಿನ ಹಣ್ಣುಗಳನ್ನು ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಮೊದಲ ಮಹಡಿಯಲ್ಲಿ ಕೈಮಗ್ಗ ವಸ್ತುಗಳ ಪ್ರದರ್ಶನ ಮಾರಾಟ, ಕರಕುಶಲ ವಸ್ತುಗಳ ಪ್ರದರ್ಶನ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಹಲಸು ಮೇಳದಲ್ಲಿ ಕೆಂಪು, ಚಂದ್ರ ಹಲಸಿನ ಪ್ರದರ್ಶನ ಮಾರಾಟ ಇರುತ್ತದೆ. ಹೋಳಿಗೆ, ಜಿಲೇಬಿ, ಕಡುಬು, ಹಪ್ಪಳ, ಚಿಪ್ಸ್, ಕೇಸರಿಬಾತ್, ಪಾಯಸ, ಕಬಾಬ್, ಉಪ್ಪಿನ ಕಾಯಿ, ಪತ್ರೊಡೆ, ಪೋಡಿ ಸೇರಿ ಹಲವು ಖಾದ್ಯಗಳು ಬಿಸಿಬಿಸಿಯಾಗಿ ಸಿದ್ದಪಡಿಸಿಕೊಡಲಾಗುತ್ತದೆ. ಹಲಸು ಬೆಳೆಯುವ ಬೆಳೆಗಾರರಿಗೆ, ಹಲಸಿನ ಉದ್ದಿಮೆ ನಡೆಸುವವರಿಗೆ ಇಂತಹ ಮೇಳಗಳ ಮೂಲಕ ಪ್ರೋತ್ಸಾಹಿಸಲಾಗುತ್ತದೆ. ಸಾಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಹಲಸು ಮೇಳದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸಾಗರದ ರೋಟರಿ ಸಂಸ್ಥೆಯ ಅಧ್ಯಕ್ಷ ಗೌತಮ್.ಕೆಎಸ್ ಮಾತನಾಡಿ ಸಾಗರದಲ್ಲಿ ಹಲಸಿನ ಪ್ರದರ್ಶನ ಮತ್ತು ಮಾರಾಟ ಇದೇನು ಮೊದಲಲ್ಲ. ಈ ಹಿಂದೆಯೂ ಮಾಡಲಾಗಿದೆ. ಆದರೇ ಈ ಬಾರಿ ಭಟ್ಕಳ ಇನ್ನಿತರೆ ತಾಲ್ಲೂಕುಗಳಲ್ಲಿ ಹೆಚ್ಚು ಜನಪ್ರಿಯಗೊಂಡ ತಂಡದ ಮೂಲಕ ಹಲಸಿನ ಮೇಳವನ್ನು ಏರ್ಪಡಿಸಿದೆ. ಮೇಳದಲ್ಲಿ ವಿವಿಧ ಹಲಸಿನ ಹಣ್ಣಿನ ಪ್ರದರ್ಶನ, ಹಲಸಿನ ಹಣ್ಣಿನ ಖಾದ್ಯಗಳ ಮಾರಾಟ, ಹಲಸು ಸೇರಿ ವಿವಿಧ ತಳಿಗಳ ಬೀಜ ಮತ್ತು ಸಸಿಗಳ ಮಾರಾಟ ಇರುತ್ತದೆ. ಹಲಸಿನ ಹಣ್ಣಿನಿಂದ ಮಾಡಿದ ಕಡುಬು, ಚಿಪ್ಸ್, ಕಬಾಬ್ ಸೇರಿ ಅನೇಕ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ ಎಂದು ಹೇಳಿದರು.
ಈ ಸುದ್ದಿಗೋಷ್ಠಿಯಲ್ಲಿ ರೈತ ಉತ್ಪಾದಕರ ಕೇಂದ್ರದ ನಾಗರಾಜ ಹೆಗಡೆ, ಭಾಸ್ಕರ ಪೂಜಾರಿ ಹಾಜರಿದ್ದರು.
SHOCKING : ಅಂತರ್ಜಾತಿ ವಿವಾಹವಾಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ!
ರಾಜ್ಯದಲ್ಲಿ ‘ಜನೌಷಧಿ ಕೇಂದ್ರ’ಗಳನ್ನು ಮುಚ್ಚಿಸಿಲ್ಲ: ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ