ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ನಿರುದ್ಯೋಗಿ ಉದ್ಯೋಗಾಕಾಂಕ್ಷಿಗಳಿಗೆ ವಿಶೇಷ ಕೋಚಿಂಗ್ ಸ್ಕೀಮ್, ‘ಒ’ ಹಂತದ ಕಂಪ್ಯೂಟರ್ ತರಬೇತಿ, ‘ಒ’ ಹಂತದ ಕಂಪ್ಯೂಟರ್ ಹಾರ್ಡ್‍ವೇರ್ ನಿರ್ವಹಣೆ ತರಬೇತಿ, ಆಫೀಸ್ ಆಟೊಮೇಷನ್ ಅಕೌಂಟಿಂಗ್ ಮತ್ತು ಪಬ್ಲಿಷಿಂಗ್ ಅಸಿಸ್ಟೆಂಟ್, ಕಂಪ್ಯೂಟರ್ ಅಪ್ಲಿಕೇಶನ್ಸ್ ಮತ್ತು ಬಿಸಿನೆಸ್ ಅಕೌಂಟಿಂಗ್ ಅಸೋಸಿಯೇಟ್ ಹಾಗೂ ಸೈಬರ್ ಸುರಕ್ಷಿತ ವೆಬ್ ಡೆವಲಪ್‍ಮೆಂಟ್ ಅಸೋಸಿಯೇಟ್ ಕೋರ್ಸ್‍ಗಳಿಗೆ ಬೆಂಗಳೂರಿನ ರಾಷ್ಟ್ರೀಯ ವೃತ್ತಿ ಕೇಂದ್ರವು ಅರ್ಜಿಗಳನ್ನು ಆಹ್ವಾನಿಸಿದೆ.
ಈ ಉಚಿತ ಕೋರ್ಸ್‍ಗಳು ಜುಲೈ 01, 2024 ರಿಂದ ಪ್ರಾರಂಭವಾಗುತ್ತವೆ. ಕೋರ್ಸ್ ತರಬೇತಿ ಅವಧಿಯಲ್ಲಿ ಮಾಹೆಯಾನ ರೂ.1000/- ಸ್ಟೈಫಂಡ್ ನೀಡಲಾಗುವುದು ಮತ್ತು ಪುಸ್ತಕಗಳು ಮತ್ತು ಸ್ಟೇಷನರಿಗಳನ್ನು ಉಚಿತವಾಗಿ ನೀಡಲಾಗುತ್ತದೆ.
ತರಬೇತಿ ಅವಧಿಯು ಒಂದು ವರ್ಷವಾಗಿದ್ದು, ಅಭ್ಯರ್ಥಿಯು ಪಿಯುಸಿ ಪಾಸಾಗಿರಬೇಕು. ವಿಶೇಷ ಕೋಚಿಂಗ್ ಯೋಜನೆಗಾಗಿ ಅಭ್ಯರ್ಥಿಯ ವಯಸ್ಸಿನ ಮಿತಿ 18 – 27 ವರ್ಷಗಳು ಮತ್ತು ಇತರ ಕೋರ್ಸ್‍ಗಳಿಗೆ 18-30 ವರ್ಷದೊಳಗಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ. ವರ್ಷಕ್ಕೆ 3 ಲಕ್ಷ ರೂ. ಮೀರಿರಬಾರದು.
ಆಸಕ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಾಕಾಂಕ್ಷಿಗಳು ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಸ್ಥಳೀಯ ಉದ್ಯೋಗ ವಿನಿಮಯ ನೋಂದಣಿ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳೊಂದಿಗೆ (ಪಾಸ್ ಪುಸ್ತಕದ ಪ್ರತಿ) ಸಲ್ಲಿಸಬೇಕು.
ಅರ್ಜಿ ನಮೂನೆಯನ್ನು ಇ-ಮೇಲ್ – ncscbengaluru@gmail.com ಮೂಲಕ ಪಡೆಯಬಹುದಾಗಿದೆ. ಅಭ್ಯರ್ಥಿಗಳು ತಮ್ಮ ಆದ್ಯತೆಯ ಕೋರ್ಸ್‍ನ ಆಯ್ಕೆಯನ್ನು ಸೂಚಿಸಬಹುದಾಗಿದ್ದು, ಕೇವಲ ಒಂದು ಕೋರ್ಸ್‍ನ್ನು ಮಾತ್ರ ಆಯ್ಕೆ ಮಾಡಬಹುದಾಗಿದೆ. ಅರ್ಜಿಯನ್ನು ಸಲ್ಲಿಸಲು ಜೂನ್ 10, 2024 ಕೊನೆಯ ದಿನಾಂಕವಾಗಿದೆ.
ಅರ್ಜಿಗಳನ್ನು ಉಪ-ಪ್ರಾದೇಶಿಕ ಉದ್ಯೋಗ ಅಧಿಕಾರಿ, ಎಸ್‍ಸಿ/ಎಸ್‍ಟಿಗಳ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ, ಸರ್ಕಾರಿ ಮಾದರಿ ಐಟಿಐ (ಪುರುಷ) ಕ್ಯಾಂಪಸ್, ಡೈರಿ ಸರ್ಕಲ್, ಬೆಂಗಳೂರು – 560029 ಈ ವಿಳಾಸಕ್ಕೆ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಿದೆ.