ಕೋಲಾರ: ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬ ಭರವಸೆ ಹುಟ್ಟಿಸಿರುವ ಗೃಹ ಆರೋಗ್ಯ ಯೋಜನೆ ಅನುಷ್ಠಾನದ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಪ್ರಗತಿ ಪರಿಶೀಲನೆ ನಡೆಸಿದರು.
ರಾಜ್ಯಾದ್ಯಂತ ಯೋಜನೆಯನ್ನ ವಿಸ್ತರಿಸಲು ರೂಪರೇಷೆ ಹಾಕಿಕೊಂಡಿರುವ ಸಚಿವ ದಿನೇಶ್ ಗುಂಡೂರಾವ್ ಕೋಲಾರ ಜಿಲ್ಲೆಯಲ್ಲಿ ಇಂದು ಯೋಜನೆ ಅನುಷ್ಠಾನಗೊಂಡಿರುವ ಹಳ್ಳಿಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೋಲಾರದ ಬಂಗಾರಪೇಟೆಯ ಮಾಗುಂದಿಯಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿದ ಸಚಿಚರು, ಗೃಹ ಆರೋಗ್ಯ ಯೋಜನೆ ಮೂಲಕ ಮನೆ ಬಾಗಿಲಿಗೆ ಔಷಧಿಗಳು ತಲುಪುತ್ತಿದೆಯಾ ಎಂದು ಜನರನ್ನು ಪ್ರಶ್ನಿಸಿದರು. ಔಷಧಿಗಳು ಮನೆಗೆ ತಲುಪುತ್ತಿರುವ ಬಗ್ಗೆ ಸಚಿವರ ಎದುರು ಹರ್ಷ ವ್ಯಕ್ತಪಡಿಸಿದ ಗ್ರಾಮಸ್ಥರು, ಯೋಜನೆಯಿಂದಾಗಿ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಮೊದಲು ಆಸ್ಪತ್ರೆಗಳಿಗೆ ಹೋಗಿ ತಪಾಸಣೆ ಮಾಡಿಸಬೇಕಿತ್ತು. ಅಲ್ಲದೇ ಮೆಡಿಕಲ್ ಶಾಪ್ ಗಳಲ್ಲಿ ಮಾತ್ರೆ ಪಡೆಯಬೇಕಾಗಿತ್ತು. ತಿಂಗಳಿಗೆ ಎರಡು ಸಾವಿರ ರೂಪಾಯಿ ಮಾತ್ರೆಗಳಿಗೆ ಖರ್ಚಾಗುತ್ತಿತ್ತು. ಅಲ್ಲದೇ ಎರಡು ಮೂರು ದಿನ ಸಿಗುವ ಕೂಲಿಯನ್ನು ಕಳೆದುಕೊಳ್ಳುತ್ತಿದ್ದೆವು. ಇದೀಗ ಮನೆಗೆ ಬಂದು ತಪಾಸಣೆ ನಡೆಸುತ್ತಾರೆ. ಔಷಧಿಗಳು ನಮಗೆ ಮನೆಬಾಗಿಲಿಗೇ ತಲುಪಿಸುತ್ತಿದ್ದಾರೆ ಎಂದು ಸಾರ್ವಜನಿಕರು ಸಚಿವರ ಎದುರು ಯೋಜನೆ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಪ್ರಾರಂಭಿಕ ಹಂತದಲ್ಲಿ ಕೋಲಾರ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಗೃಹ ಆರೋಗ್ಯ ಯೋಜನೆಯನ್ನ ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲು ಆರೋಗ್ಯ ಇಲಾಖೆ ಸಿದ್ಧತೆಗಳನ್ನ ಮಾಡಿಕೊಂಡಿದೆ. ಯೋಜನೆ ಅನುಷ್ಠಾನದಲ್ಲಿ ಯಾವುದಾದರು ಕುಂದು ಕೋರತೆಗಳಿದೆಯಾ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಜಿಲ್ಲೆಗೆ ಭೇಟಿ ನೀಡಿ ಯೋಜನೆಯ ಪ್ರಗತಿ ಪರಿಶೀಲಿಸಿದರು. ಕೋಲಾರ ಜಿಲ್ಲೆಯಲ್ಲಿ ಒಟ್ಟು 2 ಲಕ್ಷ 31 ಸಾವಿರ ಮನೆಗಳಿಗೆ ಭೇಟಿ ನೀಡಿ 30 ವರ್ಷ ಮೇಲ್ಪಟ್ಟ 6 ಲಕ್ಷಕ್ಕೂ ಹೆಚ್ಚು ಜನರನ್ನ ತಪಾಸಣೆಗೆ ಒಳಪಡಿಸಲು ಯೋಜಿಸಲಾಗಿದೆ. ಪ್ರಸ್ತುತ 76 ಸಾವಿರ ಮನೆಗಳಿಗೆ ಆರೋಗ್ಯ ಸಿಬ್ಬಂದಿಗಳು ಭೇಟಿ ನೀಡಿದ್ದು, 148111 ಜನರ ತಪಾಸಣೆ ಪೂರ್ಣಗೊಳಿಸಿದ್ದಾರೆ. ರಕ್ತದೊತ್ತಡ, ಡಯಾಬಿಟಿಸ್, ಸರ್ವೈಕಲ್, ಓರಲ್ ಹಾಗೂ, ಸ್ತನ ಕ್ಯಾನ್ಸರ್ಗಳ ಸ್ಕ್ರೀನಿಂಗ್ ಮಾಡಲಾಗಿದೆ.
ತಪಾಸಣೆಯಲ್ಲಿ 5521 ಜನರು ರಕ್ತದೊತ್ತಡ ಹೊಂದಿದ್ದಾರೆ ಎಂದು ಶಂಕಿಸಲಾಗಿದ್ದು, 836 ಜನರಿಗೆ ರೋಗ ನಿರ್ಣಯ ಮಾಡಲಾಗಿದೆ. ಒಟ್ಟು 6988 ಜನರು ಈಗಾಗಲೇ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 3738 ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 3498 ಜನರಿದ್ದಾರೆ ಎಂದು ತಪಾಸಣೆಯಲ್ಲಿ ತಿಳಿದು ಬಂದಿದೆ. ಎಲ್ಲರಿಗೂ ಮನೆ ಬಾಗಿಲಿಗೆ ಎರಡು ತಿಂಗಳಿಗೆ ಆಗುವಷ್ಟು ಔಷಧಿಗಳನ್ನ ಪೂರೈಸಲಾಗಿದ್ದು, ಮುಂದೆಯೂ ಆಶಾ ಕಾರ್ಯಕರ್ತೆಯರ ಮೂಲಕ ಮನೆ ಬಾಗಿಲಿಗೆ ಔಷಧಿಗಳನ್ನ ತಲುಪಿಸಲು ಯೋಜಿಸಲಾಗಿದೆ.
ಇನ್ನು 3155 ಜನರು ಡಯಾಬಿಟಿಸ್ ಹೊಂದಿದ್ದಾರೆಂದು ಶಂಕಿಸಲಾಗಿದ್ದು ಇವರಲ್ಲಿ 704 ಜನರಿಗೆ ರೋಗ ನಿರ್ಣಯ ಮಾಡಲಾಗಿದೆ. ಒಟ್ಟು 6740 ಜನರು ಪ್ರಸ್ತುತ ಡಯಾಬಿಟಿಸ್ ಗೆ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 2864 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 4030 ಜನರಿದ್ದಾರೆ. ಎಲ್ಲರಿಗೂ ಗೃಹ ಆರೋಗ್ಯ ಯೋಜನೆಯ ಮೂಲಕ ಉಚಿತವಾಗಿ ಔಷಧಿಗಳನ್ನ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. 45704 ಜನರನ್ನ ಸ್ತನ ಕ್ಯಾನ್ಸರ್ ತಪಾಸಣೆಗೆ ಒಳಪಡಿಸಲಾಗಿದ್ದು, 72 ಜನರಿಗೆ ಕ್ಯಾನ್ಸರ್ ರೋಗ ಲಕ್ಷಣವಿರುವ ಬಗ್ಗೆ ಶಂಕಿಸಲಾಗಿದೆ. 32714 ಜನರನ್ನ ಸರ್ವೈಕಲ್ ಕ್ಯಾನ್ಸರ್ ತಪಾಸಣೆಗೆ ಒಳಪಡಿಸಲಾಗಿದ್ದು, 151 ಜನರಿಗೆ ಸರ್ವೈಕಲ್ ಕ್ಯಾನ್ಸೆರ್ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಶಂಕಿತರನ್ನ ಹೆಚ್ಚಿನ ಚಿಕಿತ್ಸೆಗಾಗಿ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ಒದಗಿಸಲಾಗಿದೆ.
Good News: ಏಪ್ರಿಲ್ ಅಂತ್ಯಕ್ಕೆ 3,000 ಲೈನ್ ಮೆನ್ ನೇಮಕ: ಸಚಿವ ಕೆ.ಜೆ ಜಾರ್ಜ್
BIG NEWS: ‘ಸರ್ಕಾರಿ ನೌಕರ’ರು ಕಚೇರಿ ವೇಳೆಯಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ: ರಾಜ್ಯ ಸರ್ಕಾರ ಖಡಕ್ ಆದೇಶ