ಬೆಂಗಳೂರು: 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಇಂಧನ ಇಲಾಖೆಗೆ ಭರಪೂರ ಅನುದಾನ ನೀಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸದಾಗಿ ‘ಮುಖ್ಯಮಂತ್ರಿ ಸೌರ ಕೃಷಿ ಯೋಜನೆ’ಯನ್ನು ಘೋಷಿಸಿದ್ದಾರೆ. ಕೃಷಿ ಪಂಪ್‌ಸೆಟ್‌ಗಳು ಹಾಗೂ ಗೃಹಬಳಕೆಯ ಉಚಿತ ವಿದ್ಯುತ್ ಯೋಜನೆಗಳಿಗಾಗಿ (ಗೃಹ ಜ್ಯೋತಿ) ಒಟ್ಟಾರೆ ಬರೋಬ್ಬರಿ 30,000 ಕೋಟಿ ರೂ. (ನಿಖರವಾಗಿ 29,868 ಕೋಟಿ ರೂ.) ಮೀಸಲಿಟ್ಟಿರುವುದು ಈ ಬಜೆಟ್‌ನ ಪ್ರಮುಖ ಅಂಶವಾಗಿದೆ.
ಪರಿಸರ ಸ್ನೇಹಿ ಇಂಧನ ಬಳಕೆ ಹಾಗೂ ಕೃಷಿ ಸ್ವಾವಲಂಬನೆಗೆ ಒತ್ತು ನೀಡುವ ಉದ್ದೇಶದಿಂದ ಸರ್ಕಾರ ಈ ಬೃಹತ್ ಯೋಜನೆಗಳನ್ನು ಪ್ರಕಟಿಸಿದೆ.
ಹೊಸ ‘ಮುಖ್ಯಮಂತ್ರಿ ಸೌರ ಕೃಷಿ ಯೋಜನೆ’: ಕುಸುಮ್-ಸಿ (Kusum-C) ಮಾದರಿಯಲ್ಲಿ ಈ ಹೊಸ ಯೋಜನೆ ಜಾರಿಗೆ ಬರಲಿದೆ. 10,500 ಕೋಟಿ ರೂ. ವೆಚ್ಚದಲ್ಲಿ ಕೆಪಿಟಿಸಿಎಲ್ (KPTCL) ಉಪಕೇಂದ್ರಗಳಲ್ಲಿ 3,000 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾಗುತ್ತದೆ. ಜೊತೆಗೆ ನೀರಾವರಿ ಪಂಪ್‌ಸೆಟ್‌ಗಳ ವಿಕೇಂದ್ರೀಕೃತ ಫೀಡರ್‌ಗಳಿಗೆ 2,777 ಮೆ.ವ್ಯಾಟ್ ಸಾಮರ್ಥ್ಯದ ಸೋಲಾರ್ ಅಳವಡಿಕೆ ಕಾರ್ಯಗತಗೊಳಿಸಲಾಗುವುದು.
ಉಚಿತ ವಿದ್ಯುತ್‌ಗೆ ಬೃಹತ್ ಅನುದಾನ:
ರಾಜ್ಯದ 21 ಲಕ್ಷ ರೈತರಿಗೆ ಸೇರಿದ 36 ಲಕ್ಷಕ್ಕೂ ಹೆಚ್ಚು ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು 19,290 ಕೋಟಿ ರೂ. ಮೀಸಲಿಡಲಾಗಿದೆ.
‘ಗೃಹ ಜ್ಯೋತಿ’ ಯೋಜನೆಯಡಿ ನೋಂದಾಯಿಸಿಕೊಂಡಿರುವ 1.74 ಕೋಟಿ ಗ್ರಾಹಕರಿಗೆ ಉಚಿತ ವಿದ್ಯುತ್ ಒದಗಿಸಲು 10,578 ಕೋಟಿ ರೂ. ಅನುದಾನ ನೀಡಲಾಗಿದೆ.
2,000 ಮೆ.ವ್ಯಾಟ್ ವಿದ್ಯುತ್ ಸಂಗ್ರಹ ಬ್ಯಾಟರಿ (BESS): ಹುಳಿಯೂರು, ಪಾವಗಡ ಮತ್ತು ಕುಷ್ಟಗಿಯ ಸಬ್‌ಸ್ಟೇಷನ್‌ಗಳಲ್ಲಿ 3,400 ಕೋಟಿ ರೂ. ವೆಚ್ಚದಲ್ಲಿ 2,000 ಮೆಗಾವ್ಯಾಟ್ ಬ್ಯಾಟರಿ ಇಂಧನ ಸಂಗ್ರಹ ವ್ಯವಸ್ಥೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು.
1,250 ಇವಿ (EV) ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ: ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ವಿ.ಐ.ಪಿ-ಡ್ರೈವ್ (V.I.P-Drive) ಯೋಜನೆಯಡಿ ಎಸ್ಕಾಂಗಳ ಸಹಯೋಗದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ 777 ಕೋಟಿ ರೂ. ವೆಚ್ಚದಲ್ಲಿ 1,250 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ಹೊಸ ಉಪಕೇಂದ್ರಗಳ ಸ್ಥಾಪನೆ: ಪ್ರಸರಣ ಜಾಲವನ್ನು ವಿಸ್ತರಿಸುವ ನಿಟ್ಟಿನಲ್ಲಿ 2025-26ನೇ ಸಾಲಿನಲ್ಲಿ 100 ಹಾಗೂ 2026-27ನೇ ಸಾಲಿನಲ್ಲಿ ಮತ್ತೊಂದು 100 ಹೊಸ ಕೆಪಿಟಿಸಿಎಲ್ ಉಪಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ.
ನವೋದ್ಯಮಗಳಿಗೆ (Startups) ಬೆಂಬಲ: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಪ್ರೋತ್ಸಾಹಿಸಲು ಐಐಎಂ-ಬೆಂಗಳೂರು, ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯ ಹಾಗೂ ಬೆಂಗಳೂರು ಐಐಎಸ್‌ಸಿ ಸಹಯೋಗದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಇನ್‌ಕ್ಯುಬೇಷನ್ ಸೆಂಟರ್ ಆರಂಭಿಸಲು ಭರವಸೆ ನೀಡಲಾಗಿದೆ.








