ಬೆಂಗಳೂರು: ಜೆಡಿಎಸ್ ವರಿಷ್ಠ ನಾಯಕರು, ರಾಷ್ಟ್ರದ ಮಾಜಿ ಪ್ರಧಾನಮಂತ್ರಿಗಳು ಆಗಿರುವ ಹೆಚ್.ಡಿ.ದೇವೇಗೌಡರು ಭಾನುವಾರ 93ನೇ ವಸಂತಕ್ಕೆ ಪದಾರ್ಪಣೆ ಮಾಡಿದ್ದು, ತನ್ನಿಮಿತ್ತ ಅವರು ತಿರುಪತಿ ತಿರುಮಲ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸದರು.
ಬೆಳಗ್ಗೆಯೇ ತಿರುಮಲ ಕ್ಷೇತ್ರವನ್ನು ತಲುಪಿದ ಅವರನ್ನು ಟಿಟಿಡಿ ಅಧಿಕಾರಿಗಳು ಬರಮಾಡಿಕೊಂಡರು. ನಂತರ ಅವರು ವೆಂಕಟೇಶ್ವರ ಸ್ವಾಮಿ ಅವರನ್ನು ದರ್ಶನ ಮಾಡಿ ಪೂಜೆ ಸಲ್ಲಿಸಿದರು.
ಬಳಿಕ ತಿರುಪತಿಯಿಂದ ಬೆಂಗಳೂರಿಗೆ ವಾಪಸ್ಸಾದ ಮಾಜಿ ಪ್ರಧಾನಿಗಳು ಜೆಡಿಎಸ್ ಮುಖಂಡರು ಮತ್ತು ಕಾರ್ಯರ್ತರು ರಾಜ್ಯ ಕಚೇರಿ ಜೆಪಿ ಭವನದಲ್ಲಿ ಹಮ್ಮಿಕೊಂಡಿದ್ದ ತಮ್ಮ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಅವರು ಬೃಹತ್ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಗಣ್ಯರಿಂದ ಶುಭಾಶಯದ ಸುರಿಮಳೆ
ಮಾಜಿ ಪ್ರಧಾನಿಗಳಾದ ದೇವೇಗೌಡರಿಗೆ ರಾಷ್ಟ್ರ ಮತ್ತು ರಾಜ್ಯಮಟ್ಟದ ಗಣ್ಯಾತಿಗಣ್ಯ ನಾಯಕರು ಜನ್ಮದಿನ ಶುಭಾಶಯ ಕೋರಿದ್ದಾರೆ.
ಪ್ರಧಾನಿಗಳಾದ ನರೇಂದ್ರ ಮೋದಿ, ಗೃಹ ಸಚಿವರಾದ ಅಮಿತ್ ಶಾ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದ್ದಾರೆ.
“ನಮ್ಮ ಮಾಜಿ ಪ್ರಧಾನಿ ಶ್ರೀ ಎಚ್.ಡಿ. ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರು ತಮ್ಮ ಮುತ್ಸದ್ದಿತನ ಮತ್ತು ಸಾರ್ವಜನಿಕ ಸೇವೆಯಿಂದಾಗಿ ವ್ಯಾಪಕವಾಗಿ ಗೌರವಿಸಲ್ಪಡುತ್ತಾರೆ. ಹಲವಾರು ವಿಷಯಗಳ ಕುರಿತು ಅವರ ಜ್ಞಾನ ಮತ್ತು ಒಳನೋಟಗಳು ಹೆಚ್ಚಿನ ಶಕ್ತಿಯ ಮೂಲವಾಗಿದೆ. ದೇವರು ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನ ಕರುಣಿಸಲಿ” ಎಂದು ಪ್ರಧಾನಿ ಮೋದಿ ಅವರು ಹಾರೈಸಿದ್ದಾರೆ.
ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಅದೇ ರಾಜ್ಯದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್, ಪ್ರಹ್ಲಾದ್ ಜೋಷಿ, ಅರ್ಜುನ್ ಮುಂಡಾ, ರಾಮಮೋಹನ್ ನಾಯ್ಡು, ಜತಿನ್ ರಾಮ್ ಮಾಂಜಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಅನೇಕ ಗಣ್ಯರು ಮಾಜಿ ಪ್ರಧಾನಿಗಳಿಗೆ ಶುಭ ಕೋರಿದ್ದಾರೆ.
ತಂದೆಗೆ ಶುಭ ಕೋರಿದ ಹೆಚ್ಡಿಕೆ
ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿಗಳಿಗೆ ಶುಭ ಕೋರಿ ತಮ್ಮ x ಖಾತೆಯಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ನನ್ನ ಪೂಜ್ಯ ತಂದೆಯವರು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಮಂತ್ರಿಗಳೂ ಆಗಿರುವ ಮಣ್ಣಿನಮಗ ಶ್ರೀ ದೇವೇಗೌಡರಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು.
ನನ್ನ ಶಕ್ತಿ, ನನ್ನ ಧೈರ್ಯ, ನನ್ನ ಸ್ಫೂರ್ತಿ ನನ್ನ ತಂದೆಯವರೇ ಆಗಿದ್ದಾರೆ. ಅವರ ಸಂಘರ್ಷದ ಹಾದಿ, ಸಾಧನೆ, ಸೇವಾ ತತ್ಪರತೆ ನನ್ನ ಮೇಲೆ ಅಗಾಧ ಪ್ರಭಾವ ಬೀರಿದೆ. ಇಡೀ ಬದುಕನ್ನು ರಾಷ್ಟ್ರ ಸೇವೆಗೆ ಸಮರ್ಪಿಸಿರುವ ಈ ಮಹಾನ್ ನಾಯಕನ ಕುಡಿಯಾಗಿ ಹುಟ್ಟಿರುವುದು ನನ್ನ ಜನ್ಮಜನ್ಮದ ಸುಕೃತ.
ಆ ಭಗವಂತ ನನ್ನ ತಂದೆಯವರಿಗೆ ಇನ್ನೂ ಹೆಚ್ಚಿನ ಆಯುರಾಗ್ಯ ಕರುಣಿಸಲಿ. ಸುದೀರ್ಘ ಕಾಲ ನಮಗೆಲ್ಲಾ ಮಾರ್ಗದರ್ಶನ ಮಾಡಿ, ಜನಸೇವೆ ಮಾಡುವ ಚೈತನ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಸಂಭ್ರಮ
ಮಾಜಿ ಪ್ರಧಾನಿಗಳ ಜನ್ಮದಿನವನ್ನು ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಮುಖಂಡರು, ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದರು. ಕಾರ್ಯಕರ್ತರ ಜತೆ ಕೇಕ್ ಕತ್ತರಿಸಿ ದೇವೇಗೌಡರು ಎಲ್ಲಾರಿಗೂ ಸಿಹಿ ತಿನ್ನಿಸಿ ಸಂಭ್ರಮಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಪ್ರಧಾನಿಗಳು; 1986ರಿಂದ ಮೇ 18 ನೆಯ ತಾರೀಖು ಪ್ರತೀ ವರ್ಷ ತಿರುಪತಿಗೆ ಹೋಗುತ್ತಲೇ ಇದ್ದೇನೆ. ಮಂಡಿ ನೋವು ಬಂದ ಮೇಲೆ ಹೋಗಲು ಆಗಿರಲಿಲ್ಲ. ಕುಪೇಂದ್ರ ರೆಡ್ಡಿಯವರು ಅಲ್ಲಿ ಹನ್ನೆರಡು ಕೊಠಡಿಗಳ ಗೆಸ್ಟ್ ಹೌಸ್ ಕಟ್ಟಿಸಿದ್ದಾರೆ. ಅದರ ಉದ್ಘಾಟನೆ lಗೆ ಕರೆದಿದ್ದರು. ಹಾಗೇ ದೇವರ ದರ್ಶನ ಮುಗಿಸಿ ಬಂದೆ ಎಂದರು.
ಈ ರಾಷ್ಟ್ರದ ರಾಷ್ಟ್ರಪತಿ, ಪ್ರಧಾನಮಂತ್ರಿ , ಗೃಹ ಸಚಿವರು ಸೇರಿದಂತೆ ಅನೇಕರು ಗಣ್ಯರು ನನಗೆ ಜನ್ಮದಿನದ ಶುಭ ಕೋರಿದ್ದಾರೆ. ಅಮಿತ್ ಶಾ ಅವರು ದೂರವಾಣಿ ಕರೆ ಮಾಡಿ ಮಾತನಾಡಿದರು. ಎಲ್ಲರಿಗೂ ಧನ್ಯವಾದ ಹೇಳಿದ್ದೇನೆ. ಎಲ್ಲರಿಗೂ ನಾನು ತುಂಬಾ ಆಭಾರಿಯಾಗಿದ್ದೇನೆ. ಪ್ರಧಾನಮಂತ್ರಿ, ಗೃಹ ಮಂತ್ರಿಗಳು ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ನನ್ನ ನೆನಪು ಮಾಡಿಕೊಂಡು ಶುಭಾಶಯಗಳನ್ನು ಹೇಳಿದ್ದಾರೆ ಎಂದು ಮಾಜಿ ಪ್ರಧಾನಿಗಳು ಹೇಳಿದರು.
ಇವತ್ತು ನಾನು ಯಾವುದೇ ರಾಜಕೀಯ ಮಾತಾಡಲ್ಲ. ಮನೆ ಹತ್ತಿರ ಕೂಡಾ ಕಾರ್ಯಕರ್ತರು, ಅಭಿಮಾನಿಗಳು ಬರುತ್ತಿದ್ದಾರೆ. ಹೀಗಾಗಿ ನಿಮ್ಮೆಲ್ಲರ ಅನುಮತಿ ಪಡೆದು ತೆರಳುತ್ತಿದ್ದೇನೆ ಎಂದರು ಅವರು.
ಪಕ್ಷದ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಜವರಾಯ ಗೌಡರು, ಮಾಜಿ ಎಂ ಎಲ್ ಸಿ ಕೆ.ಎ. ತಿಪ್ಪೇಸ್ವಾಮಿ, ಹಿರಿಯ ಮುಖಂಡರು, ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜ್ಯದ ಸರ್ಕಾರಿ ನೌಕರರಿಗೆ ಮಧು ಬಂಗಾರಪ್ಪ ಗುಡ್ ನ್ಯೂಸ್: OPS ಜಾರಿಗೆ ಸರ್ಕಾರ ಬದ್ಧವೆಂದ ಸಚಿವರು
BREAKING: ಜಮ್ಮು-ಕಾಶ್ಮೀರದಲ್ಲಿ ಸೇನೆ, ಪೊಲೀಸರ ಭರ್ಜರಿ ಕಾರ್ಯಾಚರಣೆ: 42 ಜೀವಂತ ಬಾಂಬ್ ನಿಷ್ಕ್ರೀಯ