ಮಂಡ್ಯ : ಮದ್ದೂರು ನಗರದ ದೊಡ್ಡಿ ಬೀದಿಯ ಗ್ಯಾಸ್ ಚಂದ್ರು ಅವರ ಮನೆಯಲ್ಲಿ ನಡೆದಿದ್ದಂತಹ ಲಕ್ಷಾಂತರ ರೂಪಾಯಿ ಚಿನ್ನಾಭರಣಗಳ ಕಳವು ಪ್ರಕರಣವನ್ನು ಭೇದಿಸುವಲ್ಲಿ ಮದ್ದೂರು ಪೋಲೀಸರು ಯಶಸ್ವಿಯಾಗಿದ್ದು, ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮಾಜಿ ಪುರಸಭಾ ಅಧ್ಯಕ್ಷ ಎಂ.ಕೆ.ಮರೀಗೌಡನನ್ನು ಬಂಧಿಸಿ ಸುಮಾರು 15 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ 26-8-25 ರಂದು ಸಂಜೆ ಮದ್ದೂರು ನಗರದ ದೊಡ್ಡಿಬೀದಿಯ ಗ್ಯಾಸ್ ಚಂದ್ರು ಅವರ ಮನೆಗೆ ಮುಸುಕುಧಾರಿಯೊಬ್ಬ ನುಗ್ಗಿ ಅವರ ಪತ್ನಿ ಸುಶೀಲಮ್ಮ ಅವರನ್ನು ಬೆದರಿಸಿ ಮೈ ಮೇಲಿದ್ದ ವಜ್ರದ ಓಲೆ, ಬಳೆ ಸೇರಿದಂತೆ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ, ಕೃತ್ಯಕ್ಕೆ ಸಂಬಂಧಿಸಿದಂತೆ ಪೋಲೀಸರು ತನಿಖೆ ಕೈಗೊಂಡಿದ್ದ ವೇಳೆಗೆ ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ಹಿಂದೂ ಮುಸ್ಲಿಂ ಗಲಭೆ ನಡೆದ ಹಿನ್ನೆಲೆಯಲ್ಲಿ ಕೆಲ ಪೋಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಪರಿಣಾಮ ಪ್ರಕರಣ ಭೇದಿಸುವಲ್ಲಿ ಮದ್ದೂರು ಪೋಲೀಸರಿಗೆ ವಿಳಂಬಕ್ಕೆ ಕಾರಣವಾಗಿತ್ತು.
ಕೆಲ ದಿನಗಳ ಹಿಂದೆ ಮದ್ದೂರು ಪೋಲೀಸ್ ಇನ್ಸ್ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ ಹೆಚ್.ಎಸ್. ನವೀನ ಅವರು ಪ್ರಥಮವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಕಳವು ಪ್ರಕರಣಗಳ ಮಾಹಿತಿ ಕೊಂಡರು.
ಇನ್ನು ಸುಶೀಲಮ್ಮ ಅವರ ಚಿನ್ನಾಭರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಯಶವಂತ್ ಕುಮಾರ್ ಅವರ ಸೂಕ್ತ ನಿರ್ದೇಶನದ ಮೇರೆಗೆ
ಹೆಚ್.ಎಸ್.ನವೀನ ರವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. 21- 11-25 ರಂದು ತನಿಖೆಯ ಜಾಡು ಹಿಡಿದ ಪೋಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಪಕ್ಕದ ಮನೆಯ ನಿವಾಸಿ ಮಾಜಿ ಪುರಸಭಾ ಅಧ್ಯಕ್ಷ ಎಂ.ಕೆ.ಮರೀಗೌಡನನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿದ ಪರಿಣಾಮ ಕಳವು ಪ್ರಕರಣವನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಕಳವು ಮಾಲುಗಳನ್ನು ಆರೋಪಿ ಮರಿಗೌಡ ಮಳವಳ್ಳಿ ಮತ್ತು ಮದ್ದೂರಿನ ಬ್ಯಾಂಕರ್ಸ್ ಗಳಲ್ಲಿ ಚಿನ್ನ ಅಡವಿಟ್ಟಿದ್ದಾಗಿ ಒಪ್ಪಿಕೊಂಡಿದ್ದು, ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಮರಿಗೌಡನನ್ನು ಮದ್ದೂರು ನಗರದ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವರದಿ : ಗಿರೀಶ್ ರಾಜ್, ಮಂಡ್ಯ
ವಿಶೇಷ ಚೇತನ ಮಕ್ಕಳೆಂದು ಪೋಷಕರು ಕೀಳರಿಮೆ ತೋರಬೇಡಿ: ಮದ್ದೂರು ಶಾಸಕ ಕೆ.ಎಂ.ಉದಯ್
ಕ್ಷೇತ್ರದ ಮತದಾರರಿಗೆ ಕೊಟ್ಟ ಮಾತಿಗೆ ಬದ್ದನಾಗಿದ್ದೇನೆ: ಮದ್ದೂರು ಶಾಸಕ ಕೆ.ಎಂ.ಉದಯ್








