ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ವಾಕ್ಸಮರ ತಾರಕಕ್ಕೇರಿದೆ. ಗ್ಯಾರೆಂಟಿ ಯೋಜನೆ ಹಿನ್ನೆಲೆಯಲ್ಲಿ ಆದಾಯ ಕ್ರೋಡೀಕರಣಕ್ಕೆ ಹರಸಾಹಸಪಡುತ್ತಿರುವ ಕಾಂಗ್ರೆಸ್ ಸರ್ಕಾರ ಪೆಟ್ರೋಲ್-ಡೀಸೆಲ್ ದರ ಏರಿಕೆ ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಅದೇ ಹೊತ್ತಿಗೆ ಸರ್ಕಾರಿ ಸ್ವಾಮ್ಯದ KMF ಕೂಡಾ ಹಾಲಿನ ದರ ಏರಿಕೆ ಮಾಡಿ ವಿವಾದಕ್ಕೆ ಗುರಿಯಾಗಿದೆ.

ಪೆಟ್ರೋಲ್ ದರ ಏರಿಕೆ ಖಂಡಿಸಿ ಪ್ರತಿಪಕ್ಷಗಳು ಹೋರಾಟದ ಅಖಾಡದಲ್ಲಿರುವಾಗಲೇ ಹಾಲಿನ ದರ ಏರಿಕೆಯಾಗಿದ್ದು ಸರ್ಕಾರದ ಕ್ರಮವನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ. ಇದಕ್ಕೆ ಸಮಜಾಯಿಷಿ ನೀಡಿರುವ ಸಿಎಂ ಸಿದ್ದರಾಮಯ್ಯ, ಹಾಲಿನ ದರ ಏರಿಕೆಯಾಗಿಲ್ಲ, ಹಾಲಿನ ಪ್ರಮಾಣವಷ್ಟೇ ಹೆಚ್ಚಳವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಹಾಲಿನ ದರ ಏರಿಕೆಯು ಬಿಜೆಪಿ ನಾಯಕರ ತೀರ್ಮಾನವಾಗಿದೆ ಎಂದು ಕಾಂಗ್ರೆಸ್ ನಾಯಕ ರಮೇಶ್ ಬಾಬು ಹೊಸ ಬಾಂಬ್ ಸಿಡಿಸಿದ್ದಾರೆ. ರಾಜ್ಯದ ಹಾಲು ಉತ್ಪಾದಕರ ಒಕ್ಕೂಟದಲ್ಲಿ (ಕೆಎಂಎಫ್) ಬಿಜೆಪಿ ನಾಯಕರು ನಿರ್ದೇಶಕರಿದ್ದಾರೆ. ಬಿಜೆಪಿ ನಾಯಕರಿರುವ ನಿರ್ದೇಶಕರ ಮಂಡಳಿಯೇ ಹಾಲಿನವದರ ಏರಿಕೆಯ ತೀರ್ಮಾನ ಕೈಗೊಂಡಿದೆ ಎಂದು ರಮೇಶ್ ಬಾಬು ಎದಿರೇಟು ನೀಡಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷರೂ ಆದ ಮಾಜಿ ಶಾಸಕ ರಮೇಶ್ ಬಾಬು ಕರ್ನಾಟಕದಲ್ಲಿ ನಂದಿನಿ ಸಂಸ್ಥೆಯು ದೇಶದಲ್ಲೇ ಬೃಹದಾಕಾರವಾಗಿ ಬೆಳೆದಿರುವ ಒಂದು ಸಹಕಾರಿ ಸಂಸ್ಥೆಯಾಗಿದ್ದು, ಆಯಾ ಕಾಲಕ್ಕೆ ಅನುಗುಣವಾಗಿ ರೈತರ ಮತ್ತು ಸಂಸ್ಥೆಯ ಹಿತದೃಷ್ಟಿಯಿಂದ ಹಾಲು ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ. ತಮ್ಮ ರಾಜಕೀಯ ಮತ್ತು ವ್ಯಾಪಾರ ಲಾಭಕ್ಕಾಗಿ ನಂದಿನಿ ಸಂಸ್ಥೆಯನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದ್ದ ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕಿಸಲು ಎಂದಿಗೂ ತಾಕತ್ತು ತೋರದ ಸಾಂದರ್ಭಿಕ ವಿರೋಧ ಪಕ್ಷದ ನಾಯಕ ಅಶೋಕ್ ಅವರು ಹಾಲು ದರದ ಬಗ್ಗೆ ಪ್ರಸ್ತಾಪಿಸುತ್ತಿರುವುದು ಅವರ ಅಪಕ್ವ ನಾಯಕತ್ವಕ್ಕೆ ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಿದರು.

ಹಾಲು ಮಹಾಮಂಡಳಿಯಲ್ಲಿ ಬಿಜೆಪಿಯ ನಿರ್ದೇಶಕರು ಅಧಿಕಾರದಲ್ಲಿದ್ದು, ಪ್ರಾಮಾಣಿಕವಾಗಿ ಹಾಲು ದರದ ಪರಿಷ್ಕರಣೆಯನ್ನು ವಿರೋಧಿಸುವುದಾದರೆ ಮೊದಲು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲಿ ಎಂದು ರಮೇಶ್ ಬಾಬು ಪ್ರತಿಪಾದಿಸಿದರು.

ಕುವೆಂಪು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವ : ಸ್ನಾತಕ/ಸ್ನಾತಕೋತ್ತರ ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ತುರ್ತು ಪರಿಸ್ಥಿತಿ ಪ್ರಸ್ತಾಪ ತಪ್ಪಿಸಬಹುದಿತ್ತು: ಲೋಕಸಭಾ ಸ್ಪೀಕರ್ ಭೇಟಿ ಮಾಡಿದ ರಾಹುಲ್ ಗಾಂಧಿ

Share.
Exit mobile version