ಶಿವಮೊಗ್ಗ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯೋದಕ್ಕೆ ಬಿಡುವುದಿಲ್ಲ. ಪಶ್ಚಿಮ ಘಟ್ಟದ ಅಮೂಲ್ಯ ಸಸ್ಯ ಸಂಪತ್ತಿನ ಒಡಲು ಬಗೆಯುವುದಕ್ಕೆ ಅವಕಾಶ ನೀಡುವುದಿಲ್ಲ. ಶರಾವತಿ ನದಿ ನೀರು ಉಳಿವಿಗಾಗಿ ಪಕ್ಷಾತೀತ ಹೋರಾಟ ಮಾಡುವುದಾಗಿ ಬಿಜೆಪಿಯ ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಾ.ಜಿ ಪರಮೇಶ್ವರ್ ಬೆಂಗಳೂರಿಗೆ ಶರಾವತಿ ನದಿ ನೀರು ಕೊಂಡೊಯ್ಯುವ ಬಗ್ಗೆ ಮುಂದಾಗಿದ್ದರು. ಅದಕ್ಕೆ ನಾವು ವಿರೋಧ ವ್ಯಕ್ತ ಪಡಿಸಿದ್ವಿ. ಆನಂತ್ರ ಬಂದಂತ ಸರ್ಕಾರಕ್ಕೆ ಶರಾವತಿ ನದಿ ನೀರು ಬೆಂಗಳೂರಿಗೆ ಒಯ್ಯುವುದರಿಂದ ಆಗುವಂತ ಪರಿಸರ ಹಾನಿಯ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಹೀಗಾಗಿ ಅಂದು ಈ ಯೋಜನೆಯನ್ನು ಕೈಬಿಡಲಾಗಿತ್ತು ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಶರಾವತಿ ನದಿ ನೀರನ್ನು ಬೆಂಗಳೂರಿನ ಜನತೆಗೆ ಕುಡಿಯುವ ನೀರಿಗಾಗಿ ಡಿಪಿಆರ್ ಸಿದ್ಧಪಡಿಸಿದೆ. 30 ಟಿಎಂಸಿ ನೀರನ್ನು ಶರಾವತಿ ನದಿಯಿಂದ ಬೆಂಗಳೂರಿಗೆ ಸರಬರಾಜು ಮಾಡೋದಕ್ಕೆ ಮುಂದಾಗಿದೆ. ಈಗಾಗಲೇ ಸರ್ವೇ ಕಾರ್ಯಕ್ಕಾಗಿ 73 ಲಕ್ಷ ಹಣವನ್ನು ಮಂಜೂರು ಮಾಡಲಾಗಿದೆ. ಇದು ಯಾವ ಕಾರಣಕ್ಕೂ ಸಾಧುವಲ್ಲ ಎಂದು ಹೇಳಿದರು.
ಈ ಹಿಂದೆ ಎತ್ತಿನಹೊಳೆ ಯೋಜನೆ ರೂಪಿಸಲಾಗಿತ್ತು. ಸಾವಿರಾರು ಕೋಟಿ ಖರ್ಚು ಮಾಡಿದಂತ ಯೋಜನೆಯಿಂದ ಒಂದೇ ಒಂದು ಹನಿ ನೀರನ್ನು ಸರಬರಾಜು ಮಾಡಲಾಗಿಲ್ಲ. ಹೀಗೆ ಇರುವಾಗ ಸಮುದ್ರ ಮಟ್ಟದಿಂದ 2,800 ಅಡಿ ಕೆಳಗಿರುವಂತ ಶರಾವತಿ ನದಿಯಿಂದ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವುದು ನಿಜಕ್ಕೂ ಸಾಧ್ಯವಿಲ್ಲ. ಇದೊಂದು ಅವೈಜ್ಞಾನಿಕವಾದದ್ದು ಎಂದು ತಿಳಿಸಿದರು.
ಶರಾವತಿ ನದಿ ನೀರು ಯೋಜನೆಯಿಂದ ಜಾರಿಗೊಳಿಸೋದಕ್ಕೆ ಕಣಿವೆ, ಬೆಟ್ಟ ಗುಡ್ಡಗಳು ಅಡ್ಡಿಯಾಗುತ್ತವೆ. ಪಶ್ಚಿಮ ಘಟ್ಟದ ಅಮೂಲ್ಯ ಸಸ್ಯ ಸಂಪತ್ತು ನಾಶವಾಗಲಿದೆ. ಬೆಟ್ಟ, ಗುಡ್ಡಗಳ ಒಡಲು ಬಗೆದು ಬೆಂಗಳೂರಿಗೆ ಶರಾವತಿ ನದಿ ನೀರು ಸರಬರಾಜು ಮಾಡೋದಕ್ಕೆ ನಾವು ಬಿಡುವುದಿಲ್ಲ ಎಂಬುದಾಗಿ ಗುಡುಗಿದರು.
ಶರಾವತಿ ನದಿ ಪಶ್ಚಿಮಾಭಿಮುಖವಾಗಿ ಹರಿಯುತ್ತಿರುವಂತ ನದಿಯಾಗಿದೆ. ಇಂತಹ ನೀರನ್ನು ಪೂರ್ವಾಭಿಮುಖವಾಗಿ ತಿರುಗಿಸಿ, ಬೆಂಗಳೂರಿಗೆ ಕೊಂಡೊಯ್ಯುವುದು ಕಾನೂನಿನಲ್ಲಿ ಅನುಮತಿಯಿಲ್ಲ. ಹೀಗೆ ತಿರುಗಿಸಬಾರದು ಎಂಬುದಾಗಿ ನೀತಿ ಕೂಡ ಇದೆ ಎಂದರು.
6 ವರ್ಷಗಳ ಹಿಂದೆ ರೂಪಿಸಿದಂತ ಶರಾವತಿ ನದಿ ನೀರು ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಕೊಂಡೊಯ್ಯೋದಕ್ಕೆ ಯೋಜನೆ ಹಾಕಿಕೊಂಡಾಗ 12,500 ಕೋಟಿ ಅಗಲಿದೆ ಎಂಬುದಾಗಿ ಅಂದಾಜಿಸಲಾಗಿತ್ತು. ಅದು ಇಂದು 35,000 ಕೋಟಿ ಆಗಬಹುದು ಎಂದು ಹೇಳಿದರು.
ಶರಾವತಿ ನದಿ ನೀರು ಯೋಜನೆಗೆ ನಮ್ಮ ವಿರೋಧವಿದೆ. ಅದಕ್ಕಾಗಿ ಹಗಲು-ರಾತ್ರಿ ಹೋರಾಟ ಮಾಡಲಾಗುತ್ತದೆ. ನಾವು ಮಾಡಿದ್ರೇ ಬಿಜೆಪಿಯವರು ವಿರೋಧಿಸುತ್ತಾರೆ ಅಂತ ಮಾತನಾಡುತ್ತಾರೆ. ಆದರೇ ಶರಾವತಿ ನದಿ ನೀರಿಗಾಗಿ ಪಕ್ಷಾತೀತವಾಗಿ ಹೋರಾಟ ಮಾಡಲಾಗುತ್ತದೆ. ಶರಾವತಿ ನದಿ ನೀರು ಉಳಿವಿಗಾಗಿ ಹೋರಾಟ ನಡೆಸಲು ರೂಪುರೇಶೆ ಸಿದ್ಧಪಡಿಸಲಾಗುತ್ತಿದೆ. ಆ ಮೂಲಕ ಸಂಘಟಿತವಾಗಿ ಹೋರಾಟಕ್ಕೆ ಇಳಿಯುವುದಾಗಿ ತಿಳಿಸಿದರು.
ಎಡ-ಬಲ ಪಂಥೀಯರೆಂಬ ಬೇಧ ಭಾವವಿಲ್ಲದೇ ಶರಾವತಿ ನದಿ ನೀರು ಉಳಿವಿಗಾಗಿ ಹೋರಾಟಕ್ಕೆ ಇಳಿಯಬೇಕು. ಈಗಾಗಲೇ ಚಿಂತಕರು, ಪರಿಸರವಾದಿಗಳು ಇದಕ್ಕೆ ವಿರೋಧಿಸಿ ಪತ್ರ ಚಳುವಳಿಯನ್ನು ಆರಂಭಿಸಿದ್ದಾರೆ. ನಾವು ಕೂಡ ಈ ಹಿಂದೆ ಹೋರಾಟ ಮಾಡಿದಂತೆ ಈಗ ಹೋರಾಟಕ್ಕೆ ಇಳಿಯಲಿದ್ದೇವೆ. ರಕ್ತ ಕೊಟ್ಟೇವು, ಶರಾವತಿ ನದಿ ನೀರು ಬಿಡೆವು ಎಂದರು.
ಶರಾವತಿ ನದಿ ನೀರು ವಿಚಾರವನ್ನು ಇಲ್ಲಿಗೆ ಬಿಡುವುದಿಲ್ಲ. ನಾವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯವರೆಗೆ ಕೊಂಡೊಯ್ಯಲಿದ್ದೇವೆ. ಸಂಘಟಿತವಾಗಿ ಹೋರಾಟ ಮಾಡಲು ಸಾಗರ ತಾಲ್ಲೂಕಿನ ಎಲ್ಲಾ ಜನರು ಬೆಂಬಲಿಸುವಂತೆ ಮಾಜಿ ಸಚಿವ ಹರತಾಳು ಹಾಲಪ್ಪ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಾಗರ ತಾಲ್ಲೂಕು ಬಿಜೆಪಿ ಅಧ್ಯಕ್ಷ ಗಣೇಶ್ ಪ್ರಸಾದ್, ಬಿಜೆಪಿ ಮುಖಂಡೆ ರಾಜನಂದಿನಿ ಕಾಗೋಡು, ರಾಜೇಶ್, ಸತೀಶ್ ಮೊಗವೀರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
Relationship : ನಿಮ್ಮ ಜೀವನ ‘ಸಂಗಾತಿ’ಯೊಂದಿಗಿನ ಸಂಬಂಧವನ್ನು ಬಲಪಡಿಸಲು ನೀವು ಬಯಸಿದರೆ, ಇದನ್ನು ಮಾಡಿ…!
ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ನಿಮಗೆ ಸಿಗಲಿರುವ ಯೋಜನೆಗಳ ಕುರಿತು ಇಲ್ಲಿದೆ ಮಾಹಿತಿ
BIG NEWS : ರಾಜ್ಯದಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದ್ರೆ 2 ಲಕ್ಷ ದಂಡ ಜೊತೆಗೆ 7 ವರ್ಷ ಜೈಲು ಶಿಕ್ಷೆ ಫಿಕ್ಸ್