ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕಾಗಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದರೂ, ಸಮಾಜದ ಅತ್ಯಂತ ವಂಚಿತ ವರ್ಗವಾದ ಮಾಜಿ ದೇವದಾಸಿಯರ ಮಾಸಾಶನವನ್ನು ಸ್ಥಗಿತಗೊಳಿಸಿ ಅವರ ಬದುಕನ್ನು ಬೀದಿಗೆ ತಳ್ಳಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಸಾಮಾಜಿಕ ನ್ಯಾಯ ಹಾಗೂ ಮಹಿಳಾ ಪರ ಆಡಳಿತದ ಹೆಸರಿನಲ್ಲಿ ವಂಚನೆ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
₹5,000 ಘೋಷಣೆ ಕೇವಲ ಪೊಳ್ಳು ಭರವಸೆ!
ರಾಜ್ಯದಲ್ಲಿರುವ ಸುಮಾರು 26,488 ಮಾಜಿ ದೇವದಾಸಿಯರ ಬದುಕು ಇಂದು ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಕಳವಳ ವ್ಯಕ್ತಪಡಿಸಿರುವ ಆರ್. ಅಶೋಕ್, “ಈ ಹಿಂದೆ ನೀಡಲಾಗುತ್ತಿದ್ದ ₹2,000 ಮಾಸಾಶನವನ್ನೇ ಸರಿಯಾಗಿ ಕೊಡಲು ಯೋಗ್ಯತೆಯಿಲ್ಲದ ಕಾಂಗ್ರೆಸ್ ಸರ್ಕಾರ, ಅದನ್ನು ₹5,000ಕ್ಕೆ ಹೆಚ್ಚಿಸುವುದಾಗಿ ಸುಳ್ಳು ಘೋಷಣೆ ಮಾಡಿ ಜನರನ್ನು ದಿಕ್ಕು ತಪ್ಪಿಸಿದೆ,” ಎಂದು ಕಿಡಿಕಾರಿದ್ದಾರೆ.
”ಇಂದು ಮಾಜಿ ದೇವದಾಸಿಯರಿಗೆ ವಾಸಿಸಲು ಸ್ವಂತ ಮನೆಯಿಲ್ಲ, ಉಳುಮೆ ಮಾಡಲು ಭೂಮಿಯಿಲ್ಲ, ಅನಾರೋಗ್ಯಕ್ಕೆ ಸರಿಯಾದ ಆರೋಗ್ಯ ಸೌಲಭ್ಯಗಳೂ ಇಲ್ಲ. ಬದುಕಿಗಾಗಿ ನಿತ್ಯ ಹೋರಾಡುತ್ತಿರುವ ಈ ಅಕ್ಕತಂಗಿಯರ ಕಣ್ಣೀರಿಗೂ ಕರಗದಷ್ಟು ಈ ಸರ್ಕಾರ ನಿರ್ದಯಿಯಾಗಿದೆ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಎಸ್ವೈ ಯೋಜನೆಯನ್ನು ಹಳ್ಳ ಹಿಡಿಸಿದ ‘ದಿವಾಳಿ’ ಆಡಳಿತ
ಮಾಜಿ ದೇವದಾಸಿಯರ ಸಬಲೀಕರಣಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಂದಿದ್ದ ದೂರದೃಷ್ಟಿಯ ಮಾನವೀಯ ಯೋಜನೆಯನ್ನು ಇಂದಿನ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಹಳ್ಳ ಹಿಡಿಸಿದೆ ಎಂದು ಅಶೋಕ್ ಆರೋಪಿಸಿದರು. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದಲ್ಲಿ ‘ದಿವಾಳಿ ಆಡಳಿತ’ ನಡೆಯುತ್ತಿದ್ದು, ಪ್ರಚಾರಕ್ಕಾಗಿ ಕೋಟಿ ಕೋಟಿ ಹಣ ಸುರಿಯುವ ಸರ್ಕಾರಕ್ಕೆ ಬಡ ಮಾಜಿ ದೇವದಾಸಿಯರ ಹೊಟ್ಟೆ ತುಂಬಿಸಲು ಹಣವಿಲ್ಲವೇ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರಕ್ಕೆ ಆರ್. ಅಶೋಕ್ ನೇರ ಪ್ರಶ್ನೆಗಳು:
ಟ್ವೀಟ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿರುವ ಅವರು ಕೆಲವು ಪ್ರಮುಖ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ:
- ಇದೇನಾ ನಿಮ್ಮ ಸಾಮಾಜಿಕ ನ್ಯಾಯ ಸಿದ್ದರಾಮಯ್ಯ..?
- ಇದೇನಾ ನಿಮ್ಮ ಮಹಿಳಾ ಪರ ಆಡಳಿತ..?
”ಒಂದೆಡೆ ‘ಶಕ್ತಿ’ ಯೋಜನೆ ಹೆಸರಿನಲ್ಲಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡು, ಇನ್ನೊಂದೆಡೆ ‘ಗೃಹಲಕ್ಷ್ಮಿ’ ಹೆಸರಿನಲ್ಲಿ ಮಹಿಳೆಯರಿಗೆ ಮಾತು ಕೊಟ್ಟ ಕಾಂಗ್ರೆಸ್ ಸರ್ಕಾರ, ಮತ್ತೊಂದೆಡೆ ಮಾಜಿ ದೇವದಾಸಿಯರ ಶಕ್ತಿಯನ್ನು ಕುಂದಿಸಿದೆ. ಅವರ ಮನೆಗೆ ತಲುಪುತ್ತಿದ್ದ ಲಕ್ಮಿಯನ್ನೇ (ಮಾಸಾಶನ) ಕಸಿದುಕೊಂಡಿರುವ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು,” ಎಂದು ಆರ್. ಅಶೋಕ್ ತಮ್ಮ ಪೋಸ್ಟ್‌ನಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.








