ಬೆಂಗಳೂರು : ಖ್ಯಾತ ಕ್ರೀಡಾಪಟು, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮ ನಿರ್ದೇಶನ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ತಾವು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ 2 ವರ್ಷ ತುಂಬಿದ ಸಂದರ್ಭದಲ್ಲಿಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಅನಿಲ್ ಕುಂಬ್ಳೆ ವಿಶ್ವದ್ಯಂತ ಖ್ಯಾತಿ ಹೊಂದಿದ್ದು, ಅರಣ್ಯ ಸಂರಕ್ಷಣೆ, ಅರಣ್ಯ ಸಂವರ್ಧನೆ, ವೃಕ್ಷ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಯಾವುದೇ ಸಂಭಾವನೆ ಇಲ್ಲ:
ಅನಿಲ್ ಕುಂಬ್ಳೆ ಅವರಿಗೆ ವನ್ಯಜೀವಿಗಳ ಬಗ್ಗೆ ಅಪಾರ ಕಾಳಜಿ ಇದೆ. ಅರಣ್ಯದ ಬಗ್ಗೆ ಪ್ರೀತಿ ಇದೆ. ಹೀಗಾಗಿ ಅವರು ಯಾವುದೇ ಸಂಭಾವನೆ ಪಡೆಯದೆ ರಾಯಭಾರಿ ಆಗಲು ಸಮ್ಮತಿಸಿದ್ದಾರೆ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮ:
ಮಾನವ ವನ್ಯಜೀವಿ ಸಂಘರ್ಷ ಇಂದು ದೊಡ್ಡ ಸವಾಲಾಗಿದೆ. ಮಾನವ -ವನ್ಯಜೀವಿ ಸಂಘರ್ಷ ನಿಯಂತ್ರಿಸಿ ಅಮೂಲ್ಯ ಜೀವಹಾನಿ ಮತ್ತು ಬೆಳೆ ಹಾನಿ ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ದಕ್ಷಿಣ ರಾಜ್ಯಗಳ ನಡುವೆ ಸಮನ್ವಯ ಸಾಧಿಸಲು ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳ ಅರಣ್ಯ ಸಚಿವರು ಮತ್ತು ಅಧಿಕಾರಿಗಳ ನಡುವೆ 10.03.2024 ರಂದು ಬಂಡೀಪುರದಲ್ಲಿ ಅಂತರ ರಾಜ್ಯ ಸಮಾವೇಶವನ್ನೂ ನಡೆಸಲಾಗಿದೆ. ಆನೆ- ಮಾನವ ಸಂಘರ್ಷ ನಿಯಂತ್ರಿಸಲು ವಿಶ್ವಾದ್ಯಂತದ ಉತ್ತಮ ರೂಢಿಗಳನ್ನು ಅಳವಡಿಸಿಕೊಳ್ಳಲು ಬೆಂಗಳೂರಿನಲ್ಲಿ 2024ರ ಆಗಸ್ಟ್ 12ರಂದು ಅಂತಾರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು ಎಂದು ಈಶ್ವರ ಖಂಡ್ರೆ ತಿಳಿಸಿದರು.
ನೆರೆಯ ರಾಜ್ಯದೊಂದಿಗೆ ಸೌಹಾರ್ದ ಸಂಬಂಧ ಕಾಪಾಡಲು ಆಂಧ್ರಪ್ರದೇಶಕ್ಕೆ 6 ಕುಮ್ಕಿ ಆನೆಗಳನ್ನು ವಿಧ್ಯುಕ್ತವಾಗಿ ನೀಡಲಾಗಿದೆ. ಅದಕ್ಕೆ ನೀವೆಲ್ಲಾ ಸಾಕ್ಷಿಯಾಗಿದ್ದೀರಿ ಎಂದರು.
ಪರಿಸರ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದ್ದು, ರಾಜ್ಯದ ಎಲ್ಲ ಚಾರಣ ಪಥಗಳ ಬುಕ್ಕಿಂಗ್ ಅನ್ನು ಆನ್ ಲೈನ್ ಮಾಡಲಾಗಿದೆ, ಅರಣ್ಯ ಅಪರಾಧಗಳನ್ನು ತಡೆಯಲು ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಲು ಗರುಡಾಕ್ಷಿ – ಆನ್ ಲೈನ್ ಎಫ್.ಐ.ಆರ್. ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಜುಂ ಪರ್ವೇಜ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮತ್ತಿತರರು ಉಪಸ್ಥಿತರಿದ್ದರು.
BIG NEWS : ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಉಚ್ಚಾಟನೆ ಮಾಡಲಾಗಿದೆ : ಬಿವೈ ವಿಜಯೇಂದ್ರ ಫಸ್ಟ್ ರಿಯಾಕ್ಷನ್