ಬೆಂಗಳೂರು: ಹಾವೇರಿ ಸೇರಿ ವಿವಿಧ ಜಿಲ್ಲೆಗಳ ಪೊಲೀಸರಿಂದ ಸ್ಥಳೀಯ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ಸಿಗಲು ಅಸಾಧ್ಯ. ಆದ್ದರಿಂದ, ವಿವಿಧ ಜಿಲ್ಲೆಗಳಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಗಳ (ಗ್ಯಾಂಗ್ ರೇಪ್) ತನಿಖೆಗೆ ಉನ್ನತ ಮಟ್ಟದ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚಿಸಬೇಕು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗ್ರಹಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ಪೊಲೀಸ್ ಅಧಿಕಾರಿಗಳಿಂದ ತನಿಖೆ ಮಾಡಿಸಿ; ನಿಗದಿತ ಕಾಲಾವಧಿಯಲ್ಲಿ ತನಿಖೆ ಮಾಡಿ ಚಾರ್ಜ್ ಶೀಟ್ ಹಾಕಿ ಉಗ್ರವಾದ ಶಿಕ್ಷೆ ಆಗುವಂತೆ ನೋಡಿಕೊಳ್ಳಿ ಎಂದು ಒತ್ತಾಯಿಸಿದರು.
3 ಜನರ ಬಂಧನವಷ್ಟೇ ಆಗಿದೆ. ಎಲ್ಲರನ್ನೂ ಬಂಧಿಸಿಲ್ಲವೇಕೆ ಎಂದು ಕೇಳಿದರು. ನಾಳೆ ನಮ್ಮ ಮಹಿಳಾ ನಿಯೋಗ ಹಾವೇರಿಗೆ ಭೇಟಿ ಕೊಡಲಿದೆ. ಸೂಕ್ತ ನಿರ್ದೇಶನ ಕೋರಿ ನ್ಯಾಯಾಂಗದ ಮೊರೆ ಹೋಗಲಿದ್ದೇವೆ ಎಂದು ಪ್ರಕಟಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಾಮಾನ್ಯ ಜನರು ಅದರಲ್ಲೂ ಹೆಣ್ಮಕ್ಕಳು ನಿರ್ಭೀತಿಯಿಂದ ಓಡಾಡಲು ಸಾಧ್ಯವಾಗುತ್ತಿಲ್ಲ. ಎಲ್ಲ ಹೆಣ್ಮಕ್ಕಳು ಆತಂಕದಿಂದ ಓಡಾಡುವಂತಾಗಿದೆ. ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬೆಂಗಳೂರು ಒಂದರಲ್ಲೇ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಶೇ 30ರಷ್ಟು ಹೆಚ್ಚಾಗಿವೆ ಎಂದು ಆಕ್ಷೇಪಿಸಿದರು.
ಅತ್ಯಾಚಾರ, ಕಿರುಕುಳ, ಹಿಂಸಾಚಾರ ಹೆಚ್ಚಾಗಿದೆ. ಗ್ರಾಮಾಂತರದಲ್ಲೂ ಮಹಿಳೆಯರು ಸುರಕ್ಷಿತವಾಗಿಲ್ಲ. ಇಂಥ ಹಲವಾರು ಪ್ರಕರಣಗಳನ್ನು ಮುಚ್ಚಿಹಾಕುತ್ತಿದ್ದಾರೆ. ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಕೆಲಸ ಮಾಡಿದರೆ ಅವರ ಮೇಲೆ ಸರಕಾರದ ವಕ್ರದೃಷ್ಟಿ ಕಾಡುತ್ತಿದೆ ಎಂದು ವಿವರಿಸಿದರು.
ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗಲೇ ವಿಧಾನಸೌಧದ ಅತ್ಯಂತ ಹತ್ತಿರ ಇರುವ ಒಬ್ಬ ಹೆಣ್ಮಗಳನ್ನು ಸಾರ್ವಜನಿಕವಾಗಿ ಥಳಿಸಿ ವಿವಸ್ತ್ರಗೊಳಿಸಿದ್ದು ಈ ಸರಕಾರದ ಮತ್ತು ಪೊಲೀಸ್ ಇಲಾಖೆ ಮೇಲೆ ಭಯ ಇಲ್ಲದ್ದನ್ನು ತೋರಿಸಿತ್ತು. ಸಾರ್ವಜನಿಕರು ತಮ್ಮ ರಕ್ಷಣೆ ಬಗ್ಗೆ ಭಯಪಡುವ ಸ್ಥಿತಿ ಉಂಟಾಗಿತ್ತು. ಕೇವಲ ಆಸ್ಪತ್ರೆಗೆ ಹೋಗಿ ನೋಡಿದರೆ ಮುಗಿಯಿತೇ? ಸರಿಯಾದ ತನಿಖೆ ಆಗಿಲ್ಲ. ಹಲವರ ಬಂಧನ ನಡೆದಿಲ್ಲ. ದಲಿತ ಮಹಿಳೆಗೆ ಹೀಗಾದರೂ ಮುಖ್ಯಮಂತ್ರಿಗಳಿಂದ ಕ್ರಮ ಇಲ್ಲ ಎಂದು ದೂರಿದರು.
ಸಮುದಾಯ ನೋಡಿ ಕೇಸು ಹಾಕುವಂತೆ ಸ್ಟಾಂಡರ್ಡ್ ಇನ್‍ಸ್ಟ್ರಕ್ಷನ್ ಕೊಟ್ಟಿದ್ದೀರಾ ಎಂದು ಗೃಹ ಸಚಿವರನ್ನು ಪ್ರಶ್ನಿಸಿದರು. ಹಾವೇರಿಯಲ್ಲಿ ನಮ್ಮನ್ನು ಯಾರೂ ಮುಟ್ಟುವುದಿಲ್ಲ ಎಂಬ ಪರಿಸ್ಥಿತಿ ಕೆಲವು ವರ್ಗದ್ದು. ಹಲವೆಡೆ ನೈತಿಕ ಪೊಲೀಸ್‍ಗಿರಿ ನಡೆದಿದೆ. ಶಿರಸಿಯ ಒಬ್ಬ ಹೆಣ್ಮಗಳು ಮತ್ತು ಬೇಕಾದವರು ಹಾನಗಲ್‍ನಲ್ಲಿ ಹೋಟೆಲ್‍ನಲ್ಲಿ ಇದ್ದರೆ ಅಕ್ಕಿಆಲೂರಿನ ಯುವಕರು ಇಬ್ಬರನ್ನೂ ಥಳಿಸಿ ಅವಳ ಗ್ಯಾಂಗ್ ರೇಪ್ ಮಾಡಿದ್ದಾರೆ. ಪೊಲೀಸರು ಇದನ್ನು ಮುಚ್ಚಿ ಹಾಕಲು ಮುಂದಾಗಿದ್ದರು ಎಂದು ತಿಳಿಸಿದರು.
ಪೊಲೀಸರು ಮೊಂಡುವಾದವನ್ನೇ ಮಾಡುತ್ತಿದ್ದರು. ವೈದ್ಯಕೀಯ ಪರೀಕ್ಷೆಗಾಗಿ ನಾನು ಒತ್ತಾಯಿಸಿದೆ. ಇವರು ಯಾರನ್ನು ರಕ್ಷಿಸಲು ಹೊರಟಿದ್ದರು? ಬೇರೆ ಕೋಮಿಗೊಂದು ನೀತಿ ಇದೆಯೇ? ಇದರ ಹಿಂದೆ ಯಾರ ಚಿತಾವಣೆ ಇದೆ? ಒತ್ತಡ ಯಾರದ್ದು ಎಂದು ಕೇಳಿದರು. ಅಲ್ಪಸಂಖ್ಯಾತ ಹೆಣ್ಮಗಳ ಮೇಲೆ ಅತ್ಯಾಚಾರ ಆಗಿದ್ದರೂ ಗೃಹ ಸಚಿವರು ಸಮರ್ಪಕ ಕ್ರಮಕ್ಕೆ ಮುಂದಾಗಿಲ್ಲ. ಪ್ರಭಾವಿಗಳ ಬಗ್ಗೆ ಇವರ ಕಾಳಜಿ ಇದೆ ಎಂದು ಟೀಕಿಸಿದರು.
ಗ್ರಾಮೀಣ ಪೊಲೀಸ್ ಸ್ಟೇಷನ್‍ಗಳು ಕಲೆಕ್ಷನ್ ಅಡ್ಡಾ ಆಗಿ ಪರಿವರ್ತನೆಗೊಂಡಿವೆ. ಕೆಲವೆಡೆ ಪೊಲೀಸ್ ಇನ್‍ಸ್ಪೆಕ್ಟರ್‍ಗಳು ಇಸ್ಪೇಟ್, ಮದ್ಯದ ದಂಧೆಗೆ ಪೊಲೀಸರೇ ಪ್ರೋತ್ಸಾಹ ಕೊಡುತ್ತಿದ್ದಾರೆ. ಕರ್ನಾಟಕವು ಜಂಗಲ್ ರಾಜ್ಯ ಆಗಿದೆ ಎಂದ ಅವರು, ಕಾಂಗ್ರೆಸ್ ಸ್ಥಳೀಯ ನಾಯಕರ ಬೆಂಬಲದಿಂದ ಪುಡಿ ರೌಡಿಗಳು ಮತ್ತೆ ಇಸ್ಪೇಟ್ ಕ್ಲಬ್, ಜೂಜು ಆರಂಭಿಸಿದ್ದಾರೆ ಎಂದರು.
ಹುಬ್ಬಳ್ಳಿಯಲ್ಲಿ ಕರಸೇವಕರ ಮೇಲೆ ಕೇಸಿಲ್ಲದಿದ್ದರೂ ಬಂಧಿಸಲಾಗಿದೆ. ವಿಪಕ್ಷ ನಾಯಕರನ್ನೂ ಬಂಧಿಸಿ ಕೇಸು ಹಾಕಿದ್ದಾರೆ. ಕೋಲಾರದಲ್ಲೂ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ 5 ಜನರಿಂದ ಅತ್ಯಾಚಾರ ಮಾಡಿದ್ದಾರೆ. ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವಿವರಿಸಿದರು. ಹಾವೇರಿಯಲ್ಲಿ ಇದೇ ಗ್ಯಾಂಗ್ ಅಲ್ಪಸಂಖ್ಯಾತ ಮಹಿಳೆ ಮೇಲೆ ಇನ್ನೊಂದು ಅತ್ಯಾಚಾರ ಮಾಡಿತ್ತು ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಇಂಥ ವಿಚಾರದಲ್ಲಿ ಯಾಕೆ ಮಾತನಾಡುತ್ತಿಲ್ಲ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಪಕ್ಷ ಕಾನೂನಿನ ಮೇಲೆ ನಂಬಿಕೆ ಇಟ್ಟಿಲ್ಲ. ಪೊಲೀಸ್ ಸ್ಟೇಷನ್‍ಗಳ ಮೇಲೆ ಬೆಂಕಿ ಹಾಕಿದ ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣದ ಬಂಧಿತ ಹಲವು ಆರೋಪಿಗಳು ಅಮಾಯಕರೆಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಇದು ವಿರೋಧಾಭಾಸವಲ್ಲವೇ? ಅಲ್ಪಸಂಖ್ಯಾತರ ತುಷ್ಟೀಕರಣ ಮೇರೆ ಮೀರಿದೆ ಎಂದು ಟೀಕಿಸಿದರು.
ರಾಜ್ಯದ ವಾಸ್ತವ ಸ್ಥಿತಿಯನ್ನು ಹಣಕಾಸು ಆಯೋಗದ ಮುಂದೆ ಹಿಂದಿನ ಸಿದ್ದರಾಮಯ್ಯರ ಸರಕಾರ ಇಟ್ಟಿರಲಿಲ್ಲ. ಈ ವಿಷಯದಲ್ಲಿ ಇವರ ವೈಫಲ್ಯವಿದೆ. 14ನೇ ಹಣಕಾಸಿಗಿಂತ ಇನ್ನೂ 1 ಲಕ್ಷ ಕೋಟಿ ಹೆಚ್ಚು ಹಣ ಬರಲಿದೆ. ನಿಗದಿತ ಕಾಲಾವಧಿ ಮುಗಿದಿಲ್ಲ. ಅಷ್ಟರೊಳಗೆ ಅನ್ಯಾಯ ಆಗಿದೆ ಎಂದರೆ ಹೇಗೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಸಿ.ಎನ್. ಅಶ್ವತ್ಥನಾರಾಯಣ್, ಶಾಸಕ ಎಸ್.ಆರ್.ವಿಶ್ವನಾಥ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ರಾಜ್ಯ ವಕ್ತಾರ ವೆಂಕಟೇಶ ದೊಡ್ಡೇರಿ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
BIG NEWS: ನಕಲಿ ‘ಮೈಸೂರು ಸ್ಯಾಂಡಲ್ ಸೋಪ್’ ತಯಾರಿಕೆ ಘಟಕದ ಮೇಲೆ ‘KSDL’ ದಾಳಿ: ‘2 ಕೋಟಿ’ ಮೌಲ್ಯದ ಸಾಮಗ್ರಿ ವಶ
ಲೋಕಸಭಾ ಚುನಾವಣೆ : ನನಗೆ ಯತಿಂದ್ರ ಸಿದ್ದರಾಮಯ್ಯ ಎದುರಾಳಿಯಾದ್ರೆ ಒಳ್ಳೆಯದು : ಪ್ರತಾಪ್ ಸಿಂಹ