ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಡೆದ ನೈತಿಕ ಪೊಲಿಸ್ ಗಿರಿ ಪ್ರಕರಣವನ್ನು ಸಂತ್ರಸ್ಥರಿಗೆ ಹಣ ಕೊಟ್ಟು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾನಗಲ್ ಪ್ರಕರಣವನ್ನು ಅಲ್ಲಿನ ಪೊಲೀಸರು ಸಂತ್ರಸ್ತರಿಗೆ ದುಡ್ಡು ಕೊಟ್ಟು ಆಮಿಷವೊಡ್ಡಿ ಮುಚ್ಚಿ ಹಾಕಲು ಯತ್ನಿಸಿದ್ದರು. ತನಿಖೆಗೆ ಎಸ್.ಐ.ಟಿ ರಚನೆ ಮಾಡಿ. ಸಿಎಂ ಸಿದ್ದರಾಮಯ್ಯ ನಾಳೆ ಹಾವೇರಿಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿಯಾದರೂ ಎಸ್ಐಟಿ ತನಿಖೆಗೆ ಘೋಷಿಸುತ್ತಾರೆ ಅಂತ ನಿರೀಕ್ಷೆ ಮಾಡುತ್ತೇನೆ ಎಂದರು.
ತನಿಖೆ ನೆಪದಲ್ಲಿ ಸಂತ್ರಸ್ಥೆಯನ್ನು ಶಿರಸಿಗೆ ಕರದೊಯ್ಯಲಾಗುತ್ತಿದೆ. ಬಿಜೆಪಿ ಮಹಿಳಾ ನಿಯೋಗ ಅಲ್ಲಿಗೆ ಭೇಟಿ ಕೊಡುತ್ತಿದೆ ಅಂತ ಈ ರೀತಿ ಮಾಡುತ್ತಿದ್ದಾರೆ. ಇದೆಲ್ಲ ರಾಜಕಾರಣವನ್ನು ಕಾಂಗ್ರೆಸ್ ನವರು ಮಾಡುತ್ತಾರೆ. ಅವರಿಂದ ನಾವೇನು ಜಾಸ್ತಿ ನಿರೀಕ್ಷೆ ಮಾಡಲು ಆಗುವುದಿಲ್ಲ ಎಂದರು.
ಇನ್ನು ರಾಮ ಮಂದಿರ ವಿಚಾರದಲ್ಲಿ ಸಿಎಂ ಯೂಟರ್ನ್ ಹೊಡೆದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯಗೆ ತಡವಾಗಿಯಾದರೂ ಬುದ್ಧಿ ಬಂದಿದೆ. ಅವರ ಹೆಸರಲ್ಲಿಯೇ ರಾಮ ಇದ್ದಾನೆ. ಅಧಿಕಾರದ ರಾಜಕಾರಣಕ್ಕಾಗಿ ತಮ್ಮ ಹೆಸರಿನಲ್ಲಿರುವ ರಾಮನನ್ನೇ ಅವರು ಕಡೆಗಣಿಸಿದರು.
ಕೊನೆಗೂ ಅವರಿಗೆ ಜ್ಞಾನೋದಯವಾಗಿದೆ. ಜನವರಿ 22ರ ನಂತರ ಅಯೋಧ್ಯೆಗೆ ಹೋಗುವುದಾಗಿ ಹೇಳಿದರು. ನಂತರ ಈಗ ಹೋಗಲ್ಲ ಅಂತಿದ್ದಾರೆ. ಅವರ ಆತ್ಮಸಾಕ್ಷಿ ಹೋಗಬೇಕಂತಿದೆ. ಆದರೆ ಹೈಕಮಾಂಡ್ ಬೇಡವೆನ್ನುತ್ತಿದೆ. ಸಿದ್ದರಾಮಯ್ಯ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಗೊಂದಲಕ್ಕೆ ಇದೇ ಸಾಕ್ಷಿ ಎಂದು ಹೇಳಿದರು.
BREAKING: ಮಣಿಪುರದಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಗೆ ಅದ್ಧೂರಿ ಚಾಲನೆ