ಬೆಂಗಳೂರು: ಉಪ ವಲಯ ಅರಣ್ಯಾಧಿಕಾರಿ (ಡಿ.ಆರ್.ಎಫ್.ಓ) ಹುದ್ದೆಗಳನ್ನು ಸಂಪೂರ್ಣವಾಗಿ ಬಡ್ತಿಯ ಮೂಲಕವೇ ತುಂಬಬೇಕು ಎಂಬ ಆಡಳಿತ ಸುಧಾರಣಾ ಇಲಾಖೆಯ ಟಿ.ಎಂ. ವಿಜಯಭಾಸ್ಕರ್ ಸಮಿತಿ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವುದಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಅರಣ್ಯ ಇಲಾಖೆಯ ನೇಮಕಾತಿಗೆ ಸಂಬಂಧಿಸಿದಂತೆ ವಿವಿಧ ಬೇಡಿಕೆ ಮುಂದಿಟ್ಟು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಅರಣ್ಯಶಾಸ್ತ್ರ ಪದವೀಧರರು ಮತ್ತು ವಿದ್ಯಾರ್ಥಿಗಳನ್ನು ಇಂದು ಭೇಟಿ ಮಾಡಿ, ಅವರ ಅಹವಾಲು ಆಲಿಸಿ ಮಾತನಾಡಿದ ಸಚಿವರು, ಪದವೀಧರ ಯುವಕರಿಗೆ ಅವಕಾಶ ಇಲ್ಲದಂತೆ ಶೇ.100ರಷ್ಟು ಹುದ್ದೆಗಳನ್ನು ಬಡ್ತಿಯ ಮೂಲಕ ತುಂಬುವುದು ಸರಿಯಲ್ಲ, ಅದೇ ರೀತಿ ಜೀವಶಾಸ್ತ್ರ, ಪ್ರಾಣಿಶಾಸ್ತ್ರ ಅಧ್ಯಯನ ಮಾಡಿದ ಇತರ ವಿಜ್ಞಾನ ಪದವೀಧರರು ಉದ್ಯೋಗ ವಂಚಿತರಾಗುವಂತೆ ಮಾಡುವುದೂ ಸಾಧುವಲ್ಲ. ಈ ಹಿನ್ನೆಲೆಯಲ್ಲಿ ಒಂದು ವಾರದೊಳಗೆ ತಜ್ಞರ ಸಮಿತಿ ರಚಿಸಿ, ವರದಿ ಬಂದ ಬಳಿಕ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಈಶ್ವರ ಖಂಡ್ರೆ ಭರವಸೆ ನೀಡಿದರು.
ಪ್ರಕೃತಿ ಪರಿಸರ ಉಳಿಸುವುದು ಅಗತ್ಯ
ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯದ ಪರಿಣಾಮಗಳು ಪೃಥ್ವಿಯ ಮೇಲೆ ಆಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಇರುವ ಒಂದು ಭೂಮಿಯನ್ನು ಮತ್ತು ಪ್ರಕೃತಿ, ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಅರಣ್ಯಶಾಸ್ತ್ರವನ್ನು ಆಯ್ಕೆ ಮಾಡಿಕೊಂಡು ಪರಿಸರ ಉಳಿಸಲು ಮುಂದಾಗಿರುವ ಪದವೀಧರರರಿಗೆ ಅರಣ್ಯ ಇಲಾಖೆ ನೇಮಕಾತಿಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡುವುದು ಔಚಿತ್ಯಪೂರ್ಣ ಎಂದರು.
ಇತರ ರಾಜ್ಯಗಳಲ್ಲಿ ಅರಣ್ಯ ವಿಜ್ಞಾನ ಪದವೀಧರರಿಗೆ ನೇಮಕಾತಿಯಲ್ಲಿ ನೀಡಲಾಗಿರುವ ಪ್ರಾತಿನಿಧ್ಯ ಎಷ್ಟು ಎಂಬ ವರದಿಯನ್ನೂ ಪಡೆದು, ಯಾವುದೇ ಕಾನೂನು ತೊಡಕು ಎದುರಾಗದಂತೆ ಎಲ್ಲ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ, ಶಾಸಕರಾದ ಡಾ. ರಂಗನಾಥ್, ರವಿಶಂಕರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ ಡೆಹರಾಡೂನ್: 8ನೇ ತರಗತಿ ದಾಖಲಾತಿಗಾಗಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ