ಶಿವಮೊಗ್ಗ: ಅದು ಖಾಸಗಿ ಸ್ವತ್ತಾಗಿರಲೀ, ಅರಣ್ಯ ಭೂಮಿಯಾಗಿರಲಿ ಅವುಗಳಲ್ಲಿನ ಮರಗಳನ್ನು ಕಾನೂನು ಮೀರಿ ಕಡಿತಲೆ ಮಾಡುವುದು ಅಪರಾಧ. ಆದ್ರೆ ಸಾಗರದಲ್ಲೊಬ್ಬ ಅರಣ್ಯಾಧಿಕಾರಿ ಮಾತ್ರ ಖಾಸಗಿ ಜಮೀನುಗಳಲ್ಲಿ ಮರಗಳ ಮಾರಣಹೋಮವೇ ನಡೆಯುತ್ತಿದ್ದರೂ, ಕಡಿತಲೆ ಮಾಡುವುದನ್ನು ತಡೆಗಟ್ಟೋ ಬದಲು, ಕಡಿದ ಮೇಲೆ ದಂಡ ಹಾಕೋದು ಮಾತ್ರ ನಮ್ಮ ಕೆಲಸ ಎನ್ನುವ ನಡೆಯನ್ನು ತೋರುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರು ವ್ಯಾಪ್ತಿಯ ಸರ್ವೆ ನಂಬರ್.25ರಲ್ಲಿ ಕಳೆದ ಕೆಲ ವರ್ಷಗಳ ಹಿಂದೆಯೂ ಖಾಸಗಿ ಭೂಮಿಯಲ್ಲಿ ಬೆಳೆದಿದ್ದಂತ ಮರಗಳನ್ನು ಅನುಮತಿ ಪಡೆಯದೇ ಕಡಿತಲೆ ಮಾಡಲಾಗಿತ್ತು. ಆಗಲೂ ಕೇಸ್ ಮಾಡಿ ದಂಡ ಹಾಕಿ ಅರಣ್ಯ ಇಲಾಖೆಯ ಅಧಿಕಾರಿಗಳು ಕೈ ತೊಳೆದುಕೊಂಡಿದ್ದರು. ಇದೀಗ ಮತ್ತೆ ಅದೇ ಜಮೀನು ಮಾಲೀಕನಿಂದ ಮರಗಳ ಮಾರಣಹೋಮವೇ ನಡೆದಿದೆ.
ಕಡಿತಲೆ ತಡೆಯಬೇಕಿದ್ದ ಅರಣ್ಯಾಧಿಕಾರಿ, ಸಿಬ್ಬಂದಿಗಳೇ ಕಣ್ಣಿದ್ದೂ ಕುರುಡು
ಉಳ್ಳೂರು ವ್ಯಾಪ್ತಿಯ ಸರ್ವೆ ನಂಬರ್.25ರಲ್ಲಿ ಖಾಸಗಿ ಭೂಮಿಯಲ್ಲಿ ಬೆಳೆದಿದ್ದಂತ 20ಕ್ಕೂ ಹೆಚ್ಚು ಮರಗಳನ್ನು ತಿಂಗಳಾನುಗಟ್ಟಲೇ ಕಡಿತಲೆ ಮಾಡಲಾಗಿದೆ. ಈ ಭಾಗದ ಮರಗಳ ಕಡಿತಲೆ ಮೇಲೆ ಕಣ್ಣಿಡಬೇಕಿದ್ದಂತ ವಾಚರ್, ಡಿಆರ್ ಎಫ್ ಓ ಮಾತ್ರ ಕಣ್ಣಿದ್ದೂ ಕುರುಡಾದಂತೆ ಇದ್ದಾರೆ ಎನ್ನಲಾಗಿದೆ.
ಸಾಗರದ ಉಳ್ಳೂರು ವ್ಯಾಪ್ತಿಯ ಸರ್ವೆ ನಂ.25ರಲ್ಲಿ ಖಲೀಂ ಎಂಬುವರಿಗೆ ಸೇರಿದಂತ ಖಾಸಗಿ ಜಮೀನಿನಲ್ಲಿ ಕಾಡಂತೆ ಮರಗಳಿದ್ದವು ಎಂಬುದು ಗ್ರಾಮಸ್ಥರ ಮಾತು. ಇಂತಹ ಮರಗಳನ್ನು ಕಡಿತಲೆ ಮಾಡೋದಕ್ಕೆ ಕಂದಾಯ, ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಅದ್ಯಾವುದನ್ನು ಮಾಡದೇ ತಿಂಗಳಾನುಗಟ್ಟಲೇ ಅಕ್ರಮವಾಗಿ ಮರಗಳನ್ನು ಕಡಿತಲೆ ಮಾಡಿದರೂ ವಾಚರ್, ಡಿಆರ್ ಎಫ್ ಓ ಶಿವರಾಜ್ ಮಾತ್ರ ತಮಗೆ ಸಂಬಂಧವೇ ಇಲ್ಲವೆನ್ನುವಂತೆ ನಡೆಯನ್ನು ತೋರಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅಕ್ರಮವಾಗಿ ಮರ ಕಡಿತಲೆ ಬಗ್ಗೆ ಡಿಆರ್ ಎಫ್ ಓ ಉಡಾಫೆ ಉತ್ತರ
ಈ ಬಗ್ಗೆ ಕನ್ನಡ ನ್ಯೂಸ್ ನೌ ಸಾಗರದ ಉಳ್ಳೂರು ವ್ಯಾಪ್ತಿಯ ಡಿ ಆರ್ ಎಫ್ ಓ ಶಿವರಾಜ್ ಅವರನ್ನು ಮಾಹಿತಿಗಾಗಿ ಕೇಳಿದ್ರೆ ಒಮ್ಮೆ 15 ಮರ ಕಡಿತಲೆ ಮಾಡಲಾಗಿದೆ ಅಂತ ಹೇಳಿದ್ರೆ. ಮತ್ತೊಮ್ಮೆ 20ಕ್ಕೂ ಹೆಚ್ಚು ಮರಗಳನ್ನು ಕಡಿತಲೆ ಮಾಡಿರೋದಾಗಿ ಉಡಾಫೆಯ ಉತ್ತರ ನೀಡಿದ್ದಾರೆ. ಅಲ್ಲದೇ ನಾವು ಖಾಸಗಿ ಜಮೀನಿನಲ್ಲಿ ಇರುವಂತ ಮರಗಳನ್ನು ಕಡಿಯ ಬೇಡಿ ಅಂತ ಹೇಳೋಕೂ ಅಗಲ್ಲ. ಅದನ್ನು ಕಾದುಕೊಂಡು ಕೂರೋದಕ್ಕೆ ಆಗಲ್ಲ. ನಮಗೆ ಆ ಕೆಲಸ, ಈ ಕೆಲಸವಿದೆ ಎಂಬುದಾಗಿ ಹಾರಿಕೆಯ ಉತ್ತರ ನೀಡಿದ್ದಾರೆ.
ಅಲ್ಲ ಡಿ ಆರ್ ಎಫ್ ಓ ಶಿವರಾಜ್ ಸಾಹೇಬ್ರೆ ಮರಗಳು ಕಾಡಲ್ಲಿ ಇರಲಿ, ಖಾಸಗಿಯವರ ಜಮೀನಿನಲ್ಲಿ ಇರಲಿ. ಅವುಗಳನ್ನು ರಕ್ಷಿಸಬೇಕಾಗಿರೋದು ನಿಮ್ಮ ಕರ್ತವ್ಯ. ಕಡಿತಲೆ ಮಾಡಿದಾಗ, ಕಡಿತಲೇ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಾಗ ಸ್ಥಳಕ್ಕೆ ತೆರಳಿ ಮತ್ತಷ್ಟು ಮರಗಳ ಮಾರಣಹೋಮ ತಪ್ಪಿಸಬೇಕಾಗಿದ್ದು ನಿಮ್ಮ ಕೆಲಸ. ಆ ಕೆಲಸವನ್ನೇ ಮಾಡದೇ, ಎರಡು ಮೂರು ದಿನಗಳಿಂದ ಆರಂಭಗೊಂಡಿರೋ ಹುಲಿ ಗಣತಿಯ ಸಬೂಬು ಹೇಳಿದ್ರೆ, ಈ ಹಿಂದೆ ತಾವು ಯಾವ ಬ್ಯುಸಿಯಲ್ಲಿ ಇದ್ರಿ ಅನ್ನೋದು ಜನರ ಪ್ರಶ್ನೆಯಾಗಿದೆ.
ದಂಡ ಹಾಕೋದಷ್ಟೇ ಅರಣ್ಯ ಇಲಾಖೆಯ ಕೆಲಸವೋ ಅಥವಾ ರಕ್ಷಣೆ ಮಾಡೋದೋ?
ಸಾಗರದ ಉಳ್ಳೂರಲ್ಲಿ ಕಳೆದ ಕೆಲ ವರ್ಷಗಳ ಹಿಂದೆಯೂ ಇದೇ ರೀತಿ ಅಕ್ರಮವಾಗಿ ಮರ ಕಡಿತಲೆ ಮಾಡಲಾಗಿತ್ತು. ದಂಡವನ್ನು ಜಮೀನಿನ ಮಾಲೀಕರಿಗೆ ವಿಧಿಸಿ ಎಚ್ಚರಿಕೆ ನೀಡಲಾಗಿತ್ತು. ಅಂದು ಕಡಿತಲೆ ಮಾಡಿದ್ದು ಕೇಲವೇ ಕೆಲವು. ಆದರೇ ಇದೀಗ ಉಳ್ಳೂರಿನ ಸರ್ವೆ ನಂಬರ್.25ರಲ್ಲಿ ಕಡಿತಲೆ ಮಾಡಿರೋ ಮುತ್ತುಗ, ತಾರೆ, ಬೆಂಡೆ ಸೇರಿದಂತೆ ಕಾಡು ಜಾತಿಯ 20ಕ್ಕೂ ಹೆಚ್ಚು ಮರಗಳು. ಇದು ಅರಣ್ಯ ಇಲಾಖೆ ಮಾಹಿತಿಯಾದ್ರೆ, ಸ್ಥಳೀಯರು ಹೇಳೋ ಪ್ರಕಾರ 30 ರಿಂದ 40ಕ್ಕೂ ಹೆಚ್ಚು ಮರಗಳನ್ನು ಕಡಿದು, ರಾತ್ರೋ ರಾತ್ರಿ ಬುಡಸಹಿತ ಕಿತ್ತು ಮಣ್ಣು ಮುಚ್ಚಲಾಗಿದೆ ಎನ್ನಲಾಗುತ್ತಿದೆ.
ಇನ್ನೂ ಮರಗಳನ್ನು ಕಡಿತಲೆ ಮಾಡಿದವರ ಮೇಲೆ ದಂಡ ಹಾಗೋದು ಅರಣ್ಯಾಧಿಕಾರಿಗಳಿಗೆ ಸಹಜವಾಗಿಯೇ ಬಿಟ್ಟಿದೆ. ಹಾಗಾದ್ರೆ ಅದಕ್ಕೂ ಮುನ್ನ ಕಡಿತಲೆ ಏಕೆ ನಿಲ್ಲಿಸಲಿಲ್ಲ.? ಇವರೇನು ಕೆಲಸ ಮಾಡ್ತಿದ್ದಾರೋ ಅಥವಾ ಇಲ್ಲವೋ ಎಂಬ ಪ್ರಶ್ನೆಯನ್ನು ಜನರು ಎತ್ತಿದ್ದಾರೆ.
ಒಟ್ಟಾರೆಯಾಗಿ ಕೆಲ ವರ್ಷಗಳಿಂದ ಸಾಗರ ತಾಲ್ಲೂಕಿನಲ್ಲಿ ಅರಣ್ಯ ಭೂಮಿ ಒತ್ತುವರಿ. ಅಕ್ರಮವಾಗಿ ಮರ ಕಡಿತಲೆ ದಿನೇ ದಿನೇ ಹೆಚ್ಚಾಗಿದೆ. ಕಾಡು ನಾಶವನ್ನು ತಡೆಗಟ್ಟಿ ಅಂತ ಅರಣ್ಯ ಸಚಿವ ಈಶ್ವರ್ ಖಂಡ್ರೆ ಖಡಕ್ ನಿರ್ದೇಶನ ಕೂಡ ಇದೆ. ರಾಜ್ಯದಲ್ಲಿ ಎಲ್ಲೇ ಮರಗಳ ಮಾರಣಹೋಮ ಆದ್ರೇ ಸಾಕು, ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಕ್ತ ತನಿಖೆ ನಡೆಸಿ ಶಿಸ್ತು ಕ್ರಮದ ಕೈಗೊಂಡ ನಿದರ್ಶನಗಳಿವೆ. ಅದೇ ಮಾದರಿಯಲ್ಲಿ ಸಾಗರ ಉಳ್ಳೂರಲ್ಲಿ ಮರಗಳ್ನು ಕಡಿತಲೆ ಮಾಡಿದ ಮೇಲೆ ಬರಿ ದಂಡ ಹಾಕೋದಷ್ಟೇ ಮಾಡುತ್ತಿರುವಂತ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅರಣ್ಯ ನಾಶವನ್ನು, ಮರಗಳ ಮಾರಣಹೋಮವನ್ನು ತಪ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಆ ನಿಟ್ಟಿನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು…
BREAKING : ಪಕ್ಕದ ಮನೆಯವರ ಮೇಲೆ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸುವಂತಿಲ್ಲ : ಹೈಕೋರ್ಟ್ ಮಹತ್ವದ ತೀರ್ಪು








