ಬೆಂಗಳೂರು : ಸೆ.01 ರಿಂದ 21 ನೇ ಜಾನುವಾರು ಗಣತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ದೇಶದಲ್ಲಿ 21ನೇ ಜಾನುವಾರು ಗಣತಿ ಸೆಪ್ಟಂಬರ್ 1ಕ್ಕೆ ದೇಶಾದ್ಯಂತ ಆರಂಭಗೊಳ್ಳುತ್ತಿದೆ. ಇದುವರೆಗೆ ಪುಸ್ತಕದಲ್ಲಿ ಗಣತಿ ಮಾಹಿತಿ ನಮೂದಿಸುತ್ತಿದ್ದ ಗಣತಿಕಾರರು ಈ ಬಾರಿ ಮೊದಲ ಬಾರಿಗೆ ಸ್ಮಾರ್ಟಫೋನ್ ಬಳಸಿ ಮನೆ ಮನೆಗೆ ತೆರಳಿ ಗಣತಿ ಮಾಡುವರು.
ಕೇಂದ್ರ ಪಶುಸಂಗೋಪನ ಇಲಾಖೆಯಿಂದಲೇ ‘21ಸ್ಟ್ ಲೈವ್ ಸ್ಟಾಕ್ ಸೆನ್ಸಸ್’ ಎನ್ನುವ ಪ್ರತ್ಯೇಕ ಆಪ್ ಅಭಿವೃದ್ದಿ ಪಡಿಸಲಾಗಿದ್ದು, ಬಳಸುವ ಬಗ್ಗೆಯೂ ತರಬೇತಿ ನೀಡಲಾಗಿದೆ. ಹಿಂದೆ ಪುಸ್ತಕದಲ್ಲಿ 200 ಕಾಲಂಗಳನ್ನು ಭರ್ತಿ ಮಾಡಬೇಕಿತ್ತು. ಈ ಬಾರಿ ಚುಟುಕಾಗಿ ಆಪ್ ಮೂಲಕ ಮಾಹಿತಿ ನಮೂದಿಸಬಹುದು. ನೆಟ್‌ವರ್ಕ್ ಇಲ್ಲದಿದ್ದರೂ ಈ ಆಪ್ ನೆಟ್‌ವರ್ಕ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಕೇಂದ್ರ ಸರ್ವರ್ ಜತೆ ಮಾಹಿತಿಯನ್ನು ಹಂಚಿಕೊಳ್ಳವAತೆ ವಿನ್ಯಾಸ ಪಡಿಸಲಾಗಿದೆ.
ರಾಜ್ಯದ ಪಶುಸಂಗೋಪನೆ ಇಲಾಖೆಯೂ 4 ತಿಂಗಳ ಕಾಲ ನಡೆಯುವ ಈ ಬೃಹತ್ ಸಮೀಕ್ಷಾ ಕಾರ್ಯಕ್ರಮಕ್ಕೆ ಸಜ್ಜಾಗುತ್ತದೆ. ಮಾಸ್ಟರ್ ಟ್ರೇನರ್‌ಗಳ ತರಬೇತಿ ಪೂರ್ಣಗೊಂಡಿದ್ದು, ಗಣತಿದಾರರಿಗೆ ತರಬೇತಿ ವಿವಿಧ ಹಂತಗಳಲ್ಲಿ ನಡೆಯುತ್ತದೆ.
5 ವರ್ಷಗಳಿಗೊಮ್ಮೆ ಸಮೀಕ್ಷೆ:
1919 ರಿಂದ ಜಾನುವಾರು ಗಣತಿ ನಡೆಯುತ್ತಾ ಬಂದಿದ್ದು, ಕಳೆದ 100 ವರ್ಷಗಳಲ್ಲಿ 20 ಗಣತಿ ನಡೆದಿದೆ. ಇದು 21 ನೇ ಜಾನುವಾರು ಗಣತಿಯಾಗಿದೆ. ಕರ್ನಾಟಕದಲ್ಲಿನ ಎಲ್ಲ ಮನೆಗಳಿಗೆ ಗಣತಿದಾರರು ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವರು. ಅದಕ್ಕಾಗಿ 3357 ಗಣತಿದಾರರು 730 ಮೇಲ್ವಿಚಾರಕರು ಇರುತ್ತಾರೆ. ಬಳ್ಳಾರಿ ಜಿಲ್ಲೆಯಲ್ಲಿ 55 ಗಣತಿದಾರರು 12 ಮೇಲ್ವಿಚಾರಕರು ಇರುತ್ತಾರೆ. ಗಣತಿದಾರರು ಮನೆ ಮನೆಗೆ ತೆರಳಿದರೆ, ಮೇಲ್ವಿಚಾರಕರು ಹಾಗೂ ನೋಡಲ್ ಅಧಿಕಾರಿಗಳು ಅದರ ಒಟ್ಟು ಉಸ್ತುವಾರಿ ವಹಿಸಿಕೊಳ್ಳುವರು.
ಗಣತಿ ಹೇಗಿರುತ್ತದೆ?
ಗಣತಿ ಸಂದರ್ಭದಲ್ಲಿ, ಯಾವ ತಳಿಯ ಜಾನುವಾರುಗಳು? ಯಾವ ವಯಸ್ಸು, ಎಷ್ಟು ರೈತರು, ಯಾವ ವರ್ಗದ ರೈತರು, ಎಷ್ಟು ಮಹಿಳೆಯರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ಈ ಮೂಲಕ ಸರಕಾರಗಳು ತಮ್ಮ ಮುಂದಿನ ಯೋಜನೆಯನ್ನು ಸಿದ್ದಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ರೈತರು ಹಾಗೂ ಹೈನುಗಾರಿಕೆ ಕ್ಷೇತ್ರಗಳಿಗೆ ಬೇಕಾದ ನೀತಿ ಕಾರ್ಯಕ್ರಮ ನಿರೂಪಿಸುವುದಕ್ಕಾಗಿ ಗಣತಿಯ ಅಂಶಗಳು ಬಳಕೆಯಾಗುತ್ತವೆ.
ಯಾವೆಲ್ಲ ಜಾನುವಾರು ಗಣತಿ?
ಮನೆಗಳಲ್ಲಿ ಸಾಕಲಾಗುವ ದನ, ಎತ್ತು, ಎಮ್ಮೆ, ಕೋಣ, ಆಡು, ಕುರಿ, ಕೋಳಿ, ನಾಯಿ, ಕುದುರೆ, ಎಮು ಹಾಗೂ ಆಸ್ಟಿçಚ್ ಪಕ್ಷಿಗಳ ಮಾಹಿತಿ ಪಡೆಯಲಾಗುತ್ತದೆ. ಬಿಡಾಡಿ ದನ, ನಾಯಿಗಳ ಮಾಹಿತಿಯನ್ನು ಗಣತಿಯಲ್ಲಿ ಸೇರಿಸಲಾಗುತ್ತದೆ. ಗೋ ಶಾಲೆಗಳಿದ್ದರೆ ಮಾಹಿತಿ ಪಡೆಯಲಾಗುತ್ತದೆ. 10ಕ್ಕಿಂತ ಹೆಚ್ಚು ದನಗಳಿದ್ದರೆ, 1000ಕ್ಕಿಂತ ಹೆಚ್ಚು ಕೋಳಿ ಸಾಕಿದರೆ, 50ರ ಮೇಲ್ಪಟ್ಟು ಆಡು ಸಾಕಣೆಯಿದ್ದರೆ ಅವುಗಳನ್ನು ಫಾರಂ ಎಂದು ಪರಿಗಣಿಸಿ ಮಾಹಿತಿ ನಮೂದಿಸಿಕೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.