ಬೆಂಗಳೂರು : ರಾಜ್ಯಕ್ಕೆ ಹೆಚ್ಚುವರಿ ವೈದ್ಯಕೀಯ ಸೀಟುಗಳು ಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇತ್ತು. ಅದೀಗ ಸಾಕಾರಗೊಂಡಿದೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಂಸಿ) ಆದೇಶ ನೀಡಿದೆ. ಇದರ ಜೊತೆಗೆ ಇದೇ ಮೊದಲ ಬಾರಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯರಿಗೆ 15% ಕೋಟಾವನ್ನು ನೀಡಲು ನಿರ್ಧರಿಸಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಚಿವರು ಈ ಮಾಹಿತಿ ಹಂಚಿಕೊಂಡರು.
ಹೊಸ 400 ಸೀಟುಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 15% ಎನ್‌ಆರ್‌ಐ ಕೋಟಾ ನಿಗದಿಪಡಿಸಲಾಗಿದ್ದ, ಇದಕ್ಕೆ 25 ಲಕ್ಷ ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಇದರಿಂದ ಸರ್ಕಾರಿ ವೈದ್ಯಕೀಯ ಕಾಲೇಜು ಸಂಸ್ಥೆಗಳು ಸರ್ಕಾರದ ಅನುದಾನದ ಮೇಲೆ ಹೆಚ್ಚು ಅವಲಂಬಿತವಾಗದೇ ಸ್ವಾವಲಂಬಿಯಾಗಿರಲು ನೆರವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ, ಚಿಕ್ಕಬಳ್ಳಾಪುರ, ಹಾಸನ, ರಾಯಚೂರು, ವಿಜಯನಗರ ಕಾಲೇಜುಗಳಿಗೆ ಹೆಚ್ಚುವರಿಯಾಗಿ ತಲಾ 50 ಹಂಚಿಕೆಯಾಗಲಿದೆ. ಹುಬ್ಬಳ್ಳಿಯ ಮೂರು ಸಾವಿರದ ಮಠದ ಮೆಡಿಕಲ್ ಕಾಲೇಜಿಗೂ ಹೆಚ್ಚುವರಿಯಾಗಿ 50 ಸೀಟು ಬಂದಿದೆ. ಇದು ನಿಜಕ್ಕೂ ಸಂತಸದ ವಿಷಯ ಎಂದು ಡಾ. ಪಾಟೀಲ್ ತಿಳಿಸಿದರು.
ನೀಟ್ ಫಲಿತಾಂಶದ ನಂತರ ಪ್ರಕಟಿಸಿದ್ದ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ 9,263 ಸೀಟುಗಳು ಲಭ್ಯವಿದ್ದವು. ಈಗ ಹೆಚ್ಚುವರಿಯಾಗಿ ಸೀಟುಗಳು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ ಸೀಟುಗಳ ಸಂಖ್ಯೆ ಈಗ 9,663ಕ್ಕೆ ಏರಿಕೆಯಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ದೇಶಾದ್ಯಂತ ಪ್ರಸಕ್ತ ವರ್ಷ 8000 ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಲಾಗುವುದು ಎಂದು ಎನ್‍ಎಂಸಿಯ ಅಧ್ಯಕ್ಷ ಅಭಿಜಿತ್ ಚಂದ್ರಕಾಂತ್ ಸೇಠ್ ಹೇಳಿದ್ದರು. ಈ ಘೋಷಣೆ ಮಾಡಿದ ಬೆನ್ನಲ್ಲೇ ನವದೆಹಲಿಗೆ ತೆರಳಿ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿ ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡುವಂತೆ ಸಚಿವರು ಪ್ರಸ್ತಾವನೆ ಸಲ್ಲಿಸಿದ್ದರು.
ಕರ್ನಾಟಕದಲ್ಲಿ ಪ್ರತಿ ವರ್ಷ ವೈದ್ಯಕೀಯ ಶಿಕ್ಷಣಕ್ಕೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವು ಪ್ರತಿಭಾವಂತ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಿಗೆ ಅಧಿಕ ಶುಲ್ಕ ಕಟ್ಟಿ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕರ್ನಾಟಕಕ್ಕೆ ನಿಗದಿಪಡಿಸಿರುವ ವೈದ್ಯಕೀಯ ಸೀಟುಗಳು ಜೊತೆಗೆ ಹೆಚ್ಚುವರಿಯಾಗಿ ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದೆವು ಎಂದು ಡಾ. ಪಾಟೀಲ್ ತಿಳಿಸಿದರು.
ಹೆಚ್ಚುವರಿ ಸೀಟು ಪಡೆದ ಕಾಲೇಜುಗಳು
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ಮತ್ತು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚಳವಾಗಿದೆ.
ಬೆಂಗಳೂರು ಟೆಕ್ ಸಮ್ಮಿಟ್ ಮಾದರಿಯಲ್ಲಿ ಸ್ಕಿಲ್ ಸಮ್ಮಿಟ್
ಬೆಂಗಳೂರು ಟೆಕ್ ಸಮ್ಮಿಟ್ ಮಾದರಿಯಲ್ಲಿ ಇದೇ ನವೆಂಬರ್‌ನಲ್ಲಿ ಸ್ಕಿಲ್ ಸಮ್ಮಿಟ್ ಆಯೋಜಿಸಲಾಗುತ್ತದೆ. ನವೆಂಬರ್ 4,5,6ರಂದು ಈ ಶೃಂಗಸಭೆ ಆಯೋಜಿಸಲಾಗಿದೆ ಎಂದು ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ತಿಳಿಸಿದರು.
ಮೈಸೂರಿನಲ್ಲಿ ಉದ್ಯೋಗ ಮೇಳ
ದಸರಾ ಬಳಿಕ ಮೈಸೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುತ್ತದೆ. ಇದರ ನೋಂದಣಿ ಕಾರ್ಯ ಶೀಘ್ರದಲ್ಲೇ ಆರಂಭವಾಗುತ್ತದೆ. ಈ ಉದ್ಯೋಗ ಮೇಳದ ಪೋಸ್ಟರ್ ಅನ್ನೂ ಬಿಡುಗಡೆ ಮಾಡಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.
ಮುಂದಿನ ಅಕ್ಟೋಬರ್ ತಿಂಗಳಿನಲ್ಲಿ ನರ್ಸಿಂಗ್ ಶೃಂಗಸಭೆಯನ್ನೂ ಆಯೋಜಿಸುತ್ತಿದ್ದೇವೆ. ನಂತರ ವಿದೇಶದಲ್ಲಿ ರೋಡ್ ಶೋ ಮಾಡುವ ಮೂಲಕ ಉದ್ಯೋಗ ಮೇಳಕ್ಕೆ ಆದ್ಯತೆ ನೀಡಲಾಗಿದೆ ಎಂದು ಡಾ. ಶರಣಪ್ರಕಾಶ್ ಪಾಟೀಲ್ ವಿವರಿಸಿದರು.
ಕೆಎಸ್‌ಡಿಸಿ ಅಧ್ಯಕ್ಷರಾದ ಶಿವಕಾಂತಮ್ಮ ನಾಯ್ಕ್, ಪ್ರಧಾನ ಕಾರ್ಯದರ್ಶಿಗಳಾದ ಮನೋಜ್‌ಕುಮಾರ್ ಮೀನಾ, ಮೊಹಮ್ಮದ್ ಮೋಶಿನ್, ಕೆಎಸ್‌ಡಿಸಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ಎಂ. ನಾಗರಾಜ್ ಉಪಸ್ಥಿತರಿದ್ದರು.