ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಉತ್ಪಾದನೆ, ಬಂಡವಾಳ ಮಾರುಕಟ್ಟೆಗಳು ಮತ್ತು ಸ್ಟಾರ್ಟ್ಅಪ್ಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಮುಂದಿನ ವರ್ಷ ಫೆಬ್ರವರಿ 1 ರಂದು ಮಂಡನೆಯಾಗಲಿರುವ ಮುಂಬರುವ ಬಜೆಟ್ ಬಗ್ಗೆ ಅವರ ಅಭಿಪ್ರಾಯಗಳನ್ನು ಕೇಳಿದರು.
ಸಿಐಐ ಅಧ್ಯಕ್ಷ ರಾಜೀವ್ ಮೆಮಾನಿ, ಅಸೋಚಾಮ್ ಅಧ್ಯಕ್ಷ ನಿರ್ಮಲ್ ಕುಮಾರ್ ಮಿಂಡಾ ಮತ್ತು ಎಫ್ಐಸಿಸಿಐ ಉಪಾಧ್ಯಕ್ಷ ವಿಜಯ್ ಶಂಕರ್ ಸೇರಿದಂತೆ ಹಲವಾರು ಕಂಪನಿಗಳ ಉನ್ನತ ಕಾರ್ಯನಿರ್ವಾಹಕರು ಮತ್ತು ಉದ್ಯಮ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಸಭೆಯಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಅನುರಾಧಾ ಠಾಕೂರ್ ಮತ್ತು ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಭಾಗವಹಿಸಿದ್ದರು ಎಂದು ಕೇಂದ್ರ ಹಣಕಾಸು ಸಚಿವಾಲಯ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಬಿಎಸ್ಇ, ಮಲ್ಟಿ-ಕಮೋಡಿಟಿ ಎಕ್ಸ್ಚೇಂಜ್, ಅಸೋಸಿಯೇಷನ್ ಆಫ್ ಮ್ಯೂಚುವಲ್ ಫಂಡ್ಸ್ ಇನ್ ಇಂಡಿಯಾ, ಅಸೋಸಿಯೇಷನ್ ಆಫ್ ರಿಜಿಸ್ಟರ್ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ ಮತ್ತು ಕಮೋಡಿಟಿ ಪಾರ್ಟಿಸಿಪೆಂಟ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಧಿಗಳು ಬಂಡವಾಳ ಮಾರುಕಟ್ಟೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದ ಸಭೆಯಲ್ಲಿ ಭಾಗವಹಿಸಿದ್ದರು.
ಮೂಲಗಳ ಪ್ರಕಾರ, ಬಂಡವಾಳ ಮಾರುಕಟ್ಟೆಗಳ ಪ್ರತಿನಿಧಿಗಳು ವಹಿವಾಟು ತೆರಿಗೆಯನ್ನು ಕಡಿಮೆ ಮಾಡಲು ಮತ್ತು ಹಣಕಾಸು ಮಾರುಕಟ್ಟೆಗಳನ್ನು ಮತ್ತಷ್ಟು ಆಳಗೊಳಿಸುವ ಕ್ರಮಗಳಿಗೆ ಮುಂದಾಗಿದ್ದಾರೆ.








