ನವದೆಹಲಿ: ತೋಟಗಾರಿಕೆ ಮತ್ತು ಹೈನುಗಾರಿಕೆಯನ್ನು ಬೆಳೆ ವಿಮಾ ಯೋಜನೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ವ್ಯಾಪ್ತಿಗೆ ತರಲಾಗಿಲ್ಲ ಎಂದು ಕೇಂದ್ರ ಕೃಷಿ ರಾಜ್ಯ ಸಚಿವ ರಾಮ್ ನಾಥ್ ಠಾಕೂರ್ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದರು.
ಲೋಕಸಭೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಡಾ.ಕೆ.ಸುಧಾಕರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೂವಿನ ಕೃಷಿಗೆ ಯಾವುದೇ ವಿಮಾ ಯೋಜನೆ ಇಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಮಾಹಿತಿ ನೀಡಿದೆ”.
2016-17ರಲ್ಲಿ ಈ ಯೋಜನೆ ಪ್ರಾರಂಭವಾದಾಗಿನಿಂದ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 19.68 ಕೋಟಿ ರೈತರಿಗೆ ಬೆಳೆ ನಷ್ಟಕ್ಕಾಗಿ ಒಟ್ಟು 1.73 ಲಕ್ಷ ಕೋಟಿ ರೂ.ಗಳ ಕ್ಲೈಮ್ ಮೊತ್ತವನ್ನು ಇತ್ಯರ್ಥಪಡಿಸಲಾಗಿದೆ ಎಂದು ಸಚಿವರು ಹೇಳಿದರು.
“ಹೆಚ್ಚಿನ ವಿಮಾ ಕ್ಲೈಮ್ಗಳನ್ನು ವಿಮಾ ಕಂಪನಿಗಳು ನಿಗದಿತ ಸಮಯದೊಳಗೆ ಇತ್ಯರ್ಥಪಡಿಸುತ್ತವೆ. ಆದಾಗ್ಯೂ, ಕ್ಲೈಮ್ ಗಳ ಪಾವತಿಯಲ್ಲಿನ ವಿಳಂಬ, ರಾಜ್ಯ ಸರ್ಕಾರ ಮತ್ತು ವಿಮಾ ಕಂಪನಿಗಳ ನಡುವಿನ ವಿವಾದಗಳು, ರಾಜ್ಯ ಸರ್ಕಾರವು ತನ್ನ ಪಾಲನ್ನು ಪಾವತಿಸುವಲ್ಲಿ ವಿಳಂಬ ಮತ್ತು ವಿಮಾ ಕಂಪನಿಗಳು ಸಾಕಷ್ಟು ಸಿಬ್ಬಂದಿಯನ್ನು ನಿಯೋಜಿಸುವಲ್ಲಿ ವಿಫಲವಾಗಿರುವುದು ಸೇರಿದಂತೆ ಅನೇಕ ಕಾರಣಗಳಿಂದಾಗಿ ಈ ಸಮಸ್ಯೆ ಉದ್ಭವಿಸಿದೆ. ಈಗ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗಿದೆ” ಎಂದು ಅವರು ಹೇಳಿದರು