ಶಿವಮೊಗ್ಗ: ಶಿವಮೊಗ್ಗ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದಂತ ಪೊಲೀಸರು, ಕಳ್ಳತನ ಪ್ರಕರಣ ಸಂಬಂಧ ಭದ್ರಾವತಿ ಮೂಲದ ಐವರು ಮಹಿಳೆಯರನ್ನು ಬಂಧಿಸಿದ್ದಾರೆ. ಜೊತೆ ಜೊತೆಗೆ ಅಪಾರ ಪ್ರಮಾಣದ ಒಡವೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಶಿವಮೊಗ್ಗ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ನಡೆಯುತ್ತಿದ್ದಂತ ಕಳ್ಳತನ ಪ್ರಕರಣವನ್ನು ದೊಡ್ಡಪೇಟೆ ಠಾಣೆಯ ಪೊಲೀಸರು ಸವಾಲಾಗಿ ಸ್ವೀಕರಿಸಿದ್ದರು. ಈ ಪ್ರಕರಣ ಸಂಬಂಧ ಭದ್ರಾವತಿಯ ಐವರು ಮಹಿಳೆಯರನ್ನು ಬಂಧಿಸಿದ್ದಾರೆ ಅಂತ ತಿಳಿಸಿದ್ದಾರೆ.
ಬಂಧಿತ ಐವರು ಆರೋಪಿಗಳನ್ನು ಭದ್ರಾವತಿಯ ಹೊಸಮನೆಯ ಹನುಮಂತನಗರ ಬಡಾವಣೆಯ ನಿವಾಸಿಗಳಾದಂತ ಶಾಂತಿ ಯಾನೆ ಕರ್ಕಿ(31), ಸಾವಿತ್ರಿ ಯಾನೆ ಬಾಬಾ(29), ಸುಶೀಲಮ್ಮ(66) ಹಾಗೂ ಭೋವಿ ಕಾಲೋನಿಯ ನಿವಾಸಿ ದುರ್ಗಾ ಯಾನೆ ಸಣ್ಣ ದುರ್ಗ(29) ಎಂಬುದಾಗಿ ಗುರುತಿಸಲಾಗಿದೆ ಎಂದಿದ್ದಾರೆ.
ಬಂಧಿತ ಐವರು ಆರೋಪಿಗಳಿಂದ 7 ಪ್ರಕರಣಕ್ಕೆ ಸಂಬಂಧಿಸಿದಂತೆ ರೂ.8,13,000 ಮೌಲ್ಯದ 122 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಂದಹಾಗೇ ಕಳೆದ ಜೂನ್.29, 2024ರಂದು ಶಿವಮೊಗ್ಗದ ಜೆಸಿ ನಗರದ ಮಹಿಳೆಯೊಬ್ಬರು ದಾವಣಗೆರೆಗೆ ತೆರಳಲು ಶಿವಮೊಗ್ಗದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಆಕೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದಂತ ಚಿನ್ನಾಭರಣಗಳನ್ನು ಇದೇ ಐವರು ಮಹಿಳೆಯರು ಅಪಹರಿಸಿ ಪರಾರಿಯಾಗಿದ್ದರು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿ, ಭದ್ರಾವತಿ ಮೂಲದ ಐವರು ಮಹಿಳೆಯರನ್ನು ಬಂಧಿಸಿದ್ದಾರೆ.
ಶಿವಮೊಗ್ಗ ನಗರದ ದೊಡ್ಡಪೇಟೆ ಠಾಣೆ ಇನ್ಸ್‌ಪೆಕ್ಟರ್ ರವಿ ಪಾಟೀಲ್ ನೇತೃತ್ವದಲ್ಲಿ ಎಎಸ್ಐ ನಾಗರಾಜ್, ಫಾಲಾಕ್ಷ ನಾಯ್ಕ್, ಲಚ್ಚನಾಯ್ಕ್, ಸಿಪಿಸಿಗಳಾದ ಚಂದ್ರ ನಾಯ್ಕ್, ಗುರುನಾಯ್ಕ್, ನಿತಿನ್, ಪುನೀತ್ ರಾವ್, ಸಿಬ್ಬಂದಿಗಳಾದ ದೀಪಾ ಎಸ್ ಹುಬ್ಬಳ್ಳಿ, ಪೂಜಾ, ಸುಮಿತ್ರಬಾಯಿ, ಲಕ್ಷ್ಮೀರವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.