ತಹರಾನ್:ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಅಮೆರಿಕದ ರಕ್ಷಣಾ ಇಲಾಖೆಯ ಹೇಳಿಕೆಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ಅಮೆರಿಕವು ತನ್ನ ಸೇನಾ ಯಶಸ್ಸಿನ ಬಗ್ಗೆ ನೀಡುತ್ತಿರುವ ವರದಿಗಳು ವಿಯೆಟ್ನಾಂ ಯುದ್ಧದ ಕಾಲದ ವಿಶ್ವಾಸಾರ್ಹವಲ್ಲದ “ಫೈವ್ ಓ ಕ್ಲಾಕ್ ಫಾಲಿಸ್” (Five O’Clock Follies) ನಂತೆಯೇ ಇವೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
1960 ಮತ್ತು 70ರ ದಶಕದ ವಿಯೆಟ್ನಾಂ ಯುದ್ಧದ ಸಮಯದಲ್ಲಿ, ಸೈಗಾನ್‌ನಲ್ಲಿ ಅಮೆರಿಕದ ಮಿಲಿಟರಿ ಅಧಿಕಾರಿಗಳು ಪ್ರತಿದಿನ ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಅಲ್ಲಿ ಅವರು ಅಮೆರಿಕ ಯುದ್ಧದಲ್ಲಿ ಗೆಲ್ಲುತ್ತಿದೆ ಎಂದು ಸುಳ್ಳು ಅಂಕಿಅಂಶಗಳನ್ನು ನೀಡುತ್ತಿದ್ದರು. ಆದರೆ ವಾಸ್ತವದಲ್ಲಿ ಅಮೆರಿಕ ಸಾವಿರಾರು ಸೈನಿಕರನ್ನು ಕಳೆದುಕೊಂಡು ಸೋಲುತ್ತಿತ್ತು. ಈ ಅತಿರಂಜಿತ ಮತ್ತು ಸುಳ್ಳು ವರದಿಗಳನ್ನು ಪತ್ರಕರ್ತರು ಅಂದು “ಫೈವ್ ಓ ಕ್ಲಾಕ್ ಫಾಲಿಸ್” (ಐದು ಗಂಟೆಯ ಮೂರ್ಖತನದ ಪ್ರದರ್ಶನ) ಎಂದು ಕರೆಯುತ್ತಿದ್ದರು.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರು ನೀಡುತ್ತಿರುವ ವರದಿಗಳು ಯುದ್ಧಭೂಮಿಯ ವಾಸ್ತವಕ್ಕೆ ಸಂಬಂಧಿಸಿಲ್ಲ ಎಂದು ಅರಾಗ್ಚಿ ಕಿಡಿಕಾರಿದ್ದಾರೆ.ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿದ್ದೇವೆ ಎಂದು ಅಮೆರಿಕ ಹೇಳಿಕೊಳ್ಳುತ್ತಿದೆ. ಆದರೆ ಇತ್ತೀಚೆಗೆ ಅಮೆರಿಕದ ಅತ್ಯಾಧುನಿಕ ಎಫ್-35 (F-35) ಯುದ್ಧ ವಿಮಾನವನ್ನು ಹೊಡೆದು ಉರುಳಿಸಲಾಗಿದೆ ಎಂದು ಇರಾನ್ ಪ್ರತಿಪಾದಿಸಿದೆ.
ಇರಾನ್‌ನ ನೌಕಾಪಡೆ ಮುಗಿದುಹೋಗಿದೆ ಎಂದು ಅಮೆರಿಕ ಹೇಳುತ್ತಿದೆ. ಆದರೆ ಅಮೆರಿಕದ ಪ್ರಬಲ ಯುದ್ಧನೌಕೆಗಳಾದ ಯುಎಸ್ಎಸ್ ಜೆರಾಲ್ಡ್ ಫೋರ್ಡ್ ಮತ್ತು ಅಬ್ರಹಾಂ ಲಿಂಕನ್ ಈಗ ಇರಾನ್ ಕರಾವಳಿಯಿಂದ ದೂರ ಸರಿಯುತ್ತಿವೆ ಎಂದು ಅರಾಗ್ಚಿ ಲೇವಡಿ ಮಾಡಿದ್ದಾರೆ.








