ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಪ್ರತಿಷ್ಠಿತ ಮಾಲ್‍ಗಳಲ್ಲಿ ‘ಆಹಾರ ಪದಾರ್ಥಗಳ ಕಲಬೆರಕೆ’ ಪತ್ತೆಗೆ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಲಾಗಿದೆ. ತರಕಾರಿ, ಆಹಾರ ಧಾನ್ಯಗಳಿರುವ ಸೂಪರ್ ಮಾರ್ಕೇಟ್ ಗಳಲ್ಲೂ ಗುಣಮಟ್ಟ ಪರೀಕ್ಷೆಗೆ ರ‌್ಯಾಪಿಡ್ ಟೆಸ್ಟಿಂಗ್ ಕಿಟ್ ಅಳವಡಿಕೆ ಮಾಡಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ವಿಚಾರದಲ್ಲಿ ಇನ್ಮುಂದೆ ಸಾರ್ವಜನಿಕರೇ ಫುಡ್ ಕೋರ್ಟ್ ಗಳಲ್ಲಿ ಆಹಾರ ತಪಾಸಣೆ ನಡೆಸಿಕೊಳ್ಳಬಹುದು. ಬೆಂಗಳೂರಿನ ಮಾಲ್ ಆಫ್ ಏಷ್ಯಾದಲ್ಲಿ ಇಂದು ಆಹಾರ ತಪಾಸಣಾ ರ‌್ಯಾಪಿಟ್ ಟೆಸ್ಟಿಂಗ್ ಕಿಟ್ಸ್ ಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ಪರೀಕ್ಷಾ ವಿಧಾನವನ್ನ ಪರಿಶೀಲಿಸಿದ ಸಚಿವರು, ಆಹಾರ ಪದಾರ್ಥಗಳ ಟೆಸ್ಟಿಂಗ್ ಗೆ ಮುಂದಾಗುವ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ಒದಗಿಸುವ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಸಚಿವರು, ಸಾರ್ವಜನಿಕರು ತ್ವರಿತಗತಿಯಲ್ಲಿ ಆಹಾರ ಪದಾರ್ಥಗಳ ಗುಣಮಟ್ಟವನ್ನ ಪರೀಕ್ಷಿಸಿಕೊಳ್ಳಬಹುದಾಗಿದೆ. ಆರಂಭಿಕ ಹಂತದಲ್ಲಿ ಬೆಂಗಳೂರಿನ 10 ಮಾಲ್ ಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಆಹಾರ ಪದಾರ್ಥಗಳ ಕಲಬೆರಕೆ ಪತ್ತೆ ಹಚ್ಚುವ ಪರೀಕ್ಷಾ ಕೇಂದ್ರಗಳನ್ನ ಸ್ಥಾಪಿಸಲಾಗಿದೆ. ಸಾರ್ವಜನಿಕರು ಈ ಮಾಲ್‍ಗಳಲ್ಲಿ ಪ್ರತಿ ದಿನ ಬಳಸುವ ಆಹಾರ ಪದಾರ್ಥಗಳಾದ ಬೇಳೆ ಕಾಳುಗಳು, ಸಕ್ಕರೆ, ಅಡುಗೆ ಎಣ್ಣೆ ಟೀ-ಪುಡಿ, ಉಪ್ಪು, ಹಾಲು ಮತ್ತು ಹಾಲಿನ ಉತ್ಪನ್ನಗಳಾದ ತುಪ್ಪ, ಪನೀರ್, ಬೆಣ್ಣೆ, ತರಕಾರಿಗಳು, ಧನಿಯಾಪುಡಿ, ಕುಡಿಯುವ ನೀರು ಇತ್ಯಾದಿ ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ತ್ವರಿತ ಪರೀಕ್ಷೆಗಳಿಂದ ಖಚಿತಪಡಿಸಿಕೊಳ್ಳಬಹುದು ಎಂದರು.
ಅಲ್ಲದೇ ಬೆಂಗಳೂರಿನ ತರಕಾರಿ ಮತ್ತು ಆಹಾರ ಧಾನ್ಯಗಳನ್ನ ಮಾರಾಟ ಮಾಡುವ ಮೋರ್, ರಿಲಾಯನ್ಸ್ ಫ್ರೆಸ್ ಸೇರಿದಂತೆ ಸೂಪರ್ ಮಾರ್ಕೆಟ್ ಗಳಲ್ಲೂ ಫುಡ್ ಟೆಸ್ಟಿಂಗ್ ಕಿಟ್ ಗಳನ್ನ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಇದರಿಂದ ಹಣ್ಣು, ತರಕಾರಿಗಳು ಹಾಗೂ ಆಹಾರ ಧಾನ್ಯಗಳ ಗುಣಮಟ್ಟವನ್ನ ಪರಿಕ್ಷಿಸಿಕೊಳ್ಳಲು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಆಹಾರ ಗುಣಮಟ್ಟದ ವಿಚಾರದಲ್ಲಿ ಇತ್ತಿಚೆಗೆ ಹಲವು ಬಿಗಿ ಕ್ರಮಗಳನ್ನ ಕೈಗೊಳ್ಳುತ್ತಿರುವುದು ಆಹಾರ ತಯಾರಕರಿಗೆ ತೊಂದರೆ ಕೊಡುವ ಉದ್ದೇಶದಿಂದಲ್ಲ. ಬದಲಿಗೆ ನಮ್ಮ ಜನರಲ್ಲಿ ಅರಿವು ಮೂಡಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. ಶುದ್ಧವಾದ ಆಹಾರ ಸೇವನೆಯಿಂದ ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಹೀಗಾಗಿ ಆಹಾರ ಕಲಬೆರಕೆಯ ನಿರ್ಮೂಲನೆಗಾಗಿ ಕೈ ಜೋಡಿಸುವಂತೆ ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಿರುಪತಿ ಲಡ್ಡುವಿನ ಪ್ರಕರಣದ ಹಿನ್ನೆಲೆಯಲ್ಲಿ ತುಪ್ಪದ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನಗಳು ತಲೆದೂರಿದ್ದವು. ದನ ಮಾಂಸದ ಕೊಬ್ನಿನಾಂಶ ಬಳಸುತ್ತಿದ್ದಾರೆ ಎಂಬುದು ಸಾರ್ವಜನಿಕರಲ್ಲಿ ಆತಂಕ ವ್ಯಕ್ತವಾಗಿತ್ತು. ರಾಜ್ಯದಲ್ಲಿ ಪತಂಜಲಿ ಸೇರಿದಂತೆ 230 ಬಗೆಯ ತುಪ್ಪಗಳನ್ನ ಪರೀಕ್ಷಿಸಲಾಗಿದ್ದು, ಯಾವುದೇ ತುಪ್ಪವು ಅನ್ ಸೇಫ್ ಎಂದು ಪತ್ತೆಯಾಗಿಲ್ಲ. ಅಲ್ಲದೇ ದನ ಮಾಂಸದ ಕೊಬ್ಬಿನಾಂಶ ತುಪ್ಪಗಳಲ್ಲಿ ಪತ್ತೆಯಾಗಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.
ಬೆಂಗಳೂರಿನ ಯಾವ ಮಾಲ್ ಗಳಲ್ಲಿದೆ ರ‌್ಯಾಪಿಡ್ ಫುಡ್ ಟೆಸ್ಟಿಂಗ್ ಕಿಟ್ಸ್
ವೈಷ್ಣವಿ ಸಫೈರ್ ಸೆಂಟರ್ ತುಮಕೂರು ರಸ್ತೆ, ಎಲಿಮೆಂಟ್ಸ್ ಮಾಲ್ ಥಣಿಸಂದ್ರ, ಫೀನಿಕ್ಸ್ ಮಾಲ್ ಆಫ್ ಏಷ್ಯಾ ಬಳ್ಳಾರಿ ರಸ್ತೆ, ಮೀನಾಕ್ಷಿ ಮಾಲ್ ಬನ್ನೇರುಘಟ್ಟ ರಸ್ತೆ, ಶೋಭಾ ಮಾಲ್ ಚರ್ಚ್ ಸ್ಟ್ರೀಟ್, ಸೆಂಟ್ರಲ್ ಮಾಲ್ ಬೆಳ್ಳಂದೂರು, ಗೋಪಾಲನ್ ಸಿಗ್ನೇಚರ್ ಮಾಲ್ ಬೆನ್ನಿಗಾನಹಳ್ಳಿ, ನೆಕ್ಸಸ್ ಫೋರಂ ಮಾಲ್ ಕೋರಮಂಗಲ, ಭಾರತೀಯ ಮಾಲ್ ಆಫ್ ಬೆಂಗಳೂರು ಥಣಿಸಂದ್ರ ಹಾಗೂ ಮಾಗಡಿ ರಸ್ತೆಯಲ್ಲಿರುವ ಜಿಟಿ ವಲ್ರ್ಡ್ ಮಾಲ್ ಗಳಲ್ಲಿ ಕಾರ್ಯಕ್ರಮ ಪ್ರಾರಂಭಿಸಲಾಗಿದೆ.